ಬೆಂಗಳೂರು –
ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿರುವ ಬೆನ್ನಲ್ಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ,ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಅವಹೇಳನ ಮಾಡಿದ್ದು ಅವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆದಿಚುಂಚನಗಿರಿ ಶ್ರೀಗಳು ಮತ್ತು ಒಕ್ಕಲಿಗರ ಸಂಘ ಆಗ್ರಹಿಸಿದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರ ಭೇಟಿ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರೋಹಿತ್ ಚಕ್ರತೀರ್ಥ ವಿರುದ್ದ ಕ್ರಮ ಕೈಗೊಳ್ಳುವ ಸಂಬಂಧ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿಕೆ ನೀಡಿದ್ದು ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮಕ್ಕೆ ಒತ್ತಡ ಹೆಚ್ಚಾಗಿದೆ.ಚಕ್ರತೀರ್ಥರನ್ನು ಪರೋಕ್ಷವಾಗಿ ಸಮರ್ಥನೆ ಮಾಡುತ್ತಿರುವ ಕೆಲ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು ಅವರನ್ನು ಬದಲಾವಣೆ ಮಾಡಬಾರದು ಎಂದು ಪಟ್ಟು ಹಿಡಿದಿದ್ದು ಸರಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ ಈ ಬೆಳವಣಿಗೆಗಳ ನಡುವೆ ಶಿಕ್ಷಣ ಸಚಿವ ನಾಗೇಶ್, ಆದಿಚುಂಚನಗಿರಿ ಶ್ರೀಗಳಿಗೆ ವಿವರಣೆ ನೀಡಿದ್ದಾರೆ ಆದರೆ ಶ್ರೀಗಳು ಚಕ್ರತೀರ್ಥದ ಬದಲಾವಣೆ ಮಾಡುವುದರ ಜೊತೆಗೆ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿ ಸಲು ಆಗ್ರಹಿಸಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು.