ಸಕಲೇಶಪುರ –
ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಶಾಲೆಗೆ ಕರ್ತವ್ಯಕ್ಕೆಂದು ತೆರಳುತ್ತಿದ್ದ ಶಿಕ್ಷಕರೋರ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕಿರುವಾಲೆ ಸಮೀಪ ನಡೆದಿದೆ.ವಿಜಯ್ ಕುಮಾರ್(38)ಮೃತಪಟ್ಟ ದುರ್ಧೈವಿಯಾಗಿದ್ದಾರೆ. ತಾಲೂ ಕಿನ ಬಾಳ್ಳುಪೇಟೆ ಗ್ರಾಮದ ಬಿ.ಸಿದ್ದಣ್ಣಯ ಪ್ರೌಡಶಾಲೆ ಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಶನಿವಾರ ಮುಂಜಾನೆ ಕರ್ತವ್ಯಕ್ಕೆ ಹಾಜರಾಗಲು ತಮ್ಮ ದ್ವಿಚಕ್ರವಾಹನದಲ್ಲಿ ಉದೇವಾರ-ಸುಂಡೆಕೆರೆ-ಬೆಳಗೋಡು ಮಾರ್ಗವಾಗಿ ಬಾಳ್ಳುಪೇಟೆಗೆ ಹೋಗುವಾಗ ಅಪರಿಚಿತ ವಾಹನವೊಂದು ಕಿರುವಾಲೆ ಸಮೀಪ ಢಿಕ್ಕಿ ಹೊಡೆದ ಪರಿ ಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಅಪರಿಚಿತ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ತಲೆಯ ಭಾಗ ಚಿಂದಿಯಾಗಿದೆ.
ಪಟ್ಟಣದ ಸಂತಜೋಸೆಪರ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಇವರು ಕಳೆದ ಹಲವು ವರ್ಷಗಳಿಂದ ಬಾಳ್ಳುಪೇಟೆಯ ಬಿ.ಸಿದ್ದಣ್ಣಯ್ಯ ಪ್ರೌಡಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.ಕಳೆದ 3 ವರ್ಷಗಳ ಹಿಂದಷ್ಟೆ ಇವರ ಕೆಲಸ ಕಾಯಂಗೊಂಡಿತ್ತು.ಉತ್ತಮ ಶಿಕ್ಷಕರೆಂದೆ ಹೆಸರುವಾಸಿ ಮಾಡಿದ್ದ ಇವರು ಹಲವಾರು ಬಡ ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಯನ್ನು ಹೊರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇವರ ನಿಧನದಿಂದ ಶಾಲೆಯ ಮಕ್ಕಳು ಕಣ್ಣೀರು ಹಾಕಿದ್ದು ವಿದ್ಯಾರ್ಥಿಗಳ ಜೊತೆಗೆ ಇವರ ಒಡನಾಟಕ್ಕೆ ಸಾಕ್ಷಿಯಾಗಿದೆ. ತಾಲೂಕಿನ ಶಿಕ್ಷಕ ಸಮೂಹ ಇವರ ನಿಧನಕ್ಕೆ ಶೋಕ ವ್ಯಕ್ತಪ ಡಿಸಿದೆ.ಮೃತರು ಉದೇವಾರ ಗ್ರಾಮದವರಾಗಿದ್ದು ತಮ್ಮ ಪತ್ನಿ ಹಾಗೂ 3 ವರ್ಷದ ಮಗು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಯಿತು. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.