ಚಾಮರಾಜನಗರ –
ವಾರಸಾ ಖಾತೆಗೆ ಹೆಸರು ಸೇರ್ಪಡೆಗೊಳಿಸಲು ₹8,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ACB ಬಲೆಗೆ ಬಿದ್ದಿದ್ದಾರೆ.ಚಾಮರಾಜನಗರ ತಾಲ್ಲೂಕಿನ ಚಂದಕವಾಡಿ ಗ್ರಾಮ ಪಂಚಾಯಿತಿಯ ಗ್ರಾಮಲೆಕ್ಕಿಗ ಮಹೇಶ್‌ಕುಮಾರ್ ಅವರು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ. ದೂರುದಾರರಿಂದ ₹5,500 ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಹಣವನ್ನು ವಶಕ್ಕೆ ಪಡೆದು, ಅವರನ್ನು ಬಂಧಿಸಲಾಗಿದೆ.

ತಾಲ್ಲೂಕಿನ ಮೂಕನಪಾಳ್ಯ ಗ್ರಾಮದ ದೂರುದಾರ ತಂದೆಯ ಹೆಸರಿನಲ್ಲಿ ಇದ್ದ ಜಮೀನಿನ ಖಾತೆಯಲ್ಲಿ ಕುಟುಂಬದವರ ಹೆಸರು ಸೇರಿಸಲು ಒಂದೂವರೆ ತಿಂಗಳ ಚಂದಕವಾಡಿ ಉಪ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಖಾತೆಗೆ ಹೆಸರು ಸೇರ್ಪಡೆಗೊಳಿಸುವಾಗ ದೂರುದಾರ ಹೆಸರು ಬಿಟ್ಟು ಹೋಗಿತ್ತು.ಅವರ ಹೆಸರನ್ನು ಸೇರಿಸಲು ಗ್ರಾಮ ಲೆಕ್ಕಿಗ ಮಹೇಶ್ ಕುಮಾರ್ ಅವರು ₹8,000 ಲಂಚ ಕೇಳಿದ್ದರು ಎನ್ನಲಾಗಿದೆ.

ಮುಂಗಡವಾಗಿ ₹2,500 ನೀಡಿದ್ದರು. ಉಳಿದ ₹5,500 ನೀಡುವುದಕ್ಕೂ ಮೊದಲು ಸೋಮವಾರ ಬೆಳಿಗ್ಗೆ ಆನ್‌ಲೈನ್ ಮೂಲಕ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಹೇಶ್ ಕುಮಾರ್ ಅವರು ₹5,500 ಲಂಚ ಪಡೆಯುತ್ತಿದ್ದಾಗ ಅವರನ್ನು ಬಂಧಿಸಿದ್ದಾರೆ.ಎಸಿಬಿ ಡಿವೈಎಸ್‌ಪಿ ಸದಾನಂದ ಎ.ತಿಪ್ಪಣ್ಣವರ್ ನೇತೃತ್ವದಲ್ಲಿ ಈ ಒಂದು ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಗಳಾದ ಕಿರಣ್ ಕುಮಾರ್, ಎಲ್.ದೀಪಕ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.