ಕಾರವಾರ –
ಶಾಲಾ ಮಕ್ಕಳಿಗೆ ಆನ್ ಲೈನ್ ಸಂಕಟ ಪರಿಸ್ಥಿತಿ ಹೇಗೆ ಇದೆ ಗೊತ್ತಾ ಕೊರೊನಾ ಕಾರಣದಿಂದ ಮಕ್ಕಳು ಶಾಲೆಗೆ ಹೋಗಲು ಆಗುತ್ತಿಲ್ಲ.ಆನ್ ಲೈನ್ ಶಿಕ್ಷಣದ ಹಲವು ಸಾಧ್ಯತೆಗಳನ್ನು ಶಿಕ್ಷಣ ಕ್ಷೇತ್ರ ಹಲವು ರೀತಿಗಳಲ್ಲಿ ಬಳಸಿಕೊಳ್ಳುತ್ತಿದೆ.ಆದರೆ ಈ ವ್ಯವಸ್ಥೆಯಲ್ಲಿ ಸಮಸ್ಯೆಗಳು ಒಂದೆರೆಡಲ್ಲ.ಉತ್ತರ ಕನ್ನಡ ಜಿಲ್ಲೆಯ ಶಿಕ್ಷಕಿ ಶ್ರೀದೇವಿ ಕೆರೆಮನೆ ಸರ್ಕಾರಿ ಶಾಲೆಯ ಮಕ್ಕಳು ಎದುರಿಸುತ್ತಿರುವ ಸಂದಿಗ್ಧ ಗಳನ್ನು ಮತ್ತೊಂದು ಆಯಾಮದಿಂದ ವಿಶ್ಲೇಷಿಸಿ ದ್ದಾರೆ.
ಟೀಚ್ಮಿಂಟ್ ಆಪ್ ನಲ್ಲಿ ಪಾಠ ಮಾಡಲು ಪ್ರಾರಂಭಿಸಿ ಎರಡು ದಿನಗಳಾದವು.ಮನೆಯಲ್ಲಿ ನಾಲ್ಕೈದು ದಿನಗಳಿಂದ ಮಗನಿಗೇ ಪಾಠ ಮಾಡಿ ಎಲ್ಲವನ್ನೂ ತಿಳಿದುಕೊಂಡಿದ್ದೂ ಆಗಿದೆ. ಆದರೆ ಶಾಲಾ ಮಕ್ಕಳಿಗೆ ಕಲಿಸಲು ಹೋದಾಗಲೇ ನಿಜವಾದ ಸಮಸ್ಯೆ ಅರ್ಥ ಆಗುವುದು.
ಸಮಸ್ಯೆ-1
ಹತ್ತನೇ ಕ್ಲಾಸು ಕಣಮ್ಮ ನೀನು ಆನ್ ಲೈನ್ ಕ್ಲಾಸ್ ಗೇ ಯಾಕೆ ಜಾಯಿನ್ ಆಗ್ತಿಲ್ಲ ಎಂದು ಫೋನ್ ಮಾಡಿ ಕೇಳಿದರೆ ಇರುವುದು ಒಂದು ಸ್ಮಾರ್ಟ್ ಫೋನ್.ತಮ್ಮ ಎಂಟನೆ ತರಗತಿ.ಮೂವರು ಹುಡು ಗಿಯರ ನಂತರ ಹುಟ್ಟಿದವನು ಎಂಬ ಮುದ್ದು ಇವಳ ಕ್ಲಾಸ್ ಇರುವ ಸಮಯಕ್ಕೆ ಅವನಿಗೂ ಕ್ಲಾಸ್ ಇದೆ.ಹೀಗಾಗಿ ಅಪ್ಪ ಅಮ್ಮ ಅವನು ಫೋನ್ ಬಳಸಲಿ ಎಂದಿದ್ದಾರೆ. ಇವಳು ಹತ್ತನೆ ಕ್ಲಾಸ್ ಎಂದು ನಾವೆಷ್ಟು ಹೇಳಿದರೂ ಅವರು ಕೇಳುತ್ತಿಲ್ಲ. ಯಾಕೆಂ ದರೆ ಮಗ ಅಳುತ್ತಾನೆ.
ಸಮಸ್ಯೆ-2
ಅದು ಅವಿಭಕ್ತ ಕುಟುಂಬ. ಮನೆಯಲ್ಲಿರೋದು ಒಂದೇ ಸ್ಮಾರ್ಟ್ ಫೋನ್. ಅಣ್ಣ ತಮ್ಮಂದಿರ ಮೂವರು ಮಕ್ಕಳೂ ಶಾಲೆಗೆ ಹೋಗುತ್ತಾರೆ. ಒಬ್ಬರಿಗೆ ಕೊಟ್ಟರೆ ಉಳಿದಿಬ್ಬರಿಗೆ ತಾರತಮ್ಯ ಮಾಡಿದಂತೆ ಎಂದು ಮನೆಯ ಯಜಮಾನ ಮೂವರಿಗೂ ಕ್ಲಾಸ್ ಗೆ ಹಾಜರಾಗುವುದು ಬೇಡ ಅಂದಿದ್ದಾರೆ.
ಸಮಸ್ಯೆ-3
ಅವಳು ಹತ್ತನೇ ತರಗತಿ.ಮನೆಯಲ್ಲಿ ಆಂಡ್ರಾಯ್ಡ್ ಫೋನ್ ಇಲ್ಲ.ಪಕ್ಕದ ಮನೆಯ ಕಾಲೇಜಿಗೆ ಹೋಗು ವ ಹುಡುಗಿಯ ನಂಬರ್ ಕೊಟ್ಟಿದ್ದಾಳೆ.ಅವಳು ವ್ಯಾಟ್ಸ್ ಆಪ್ ನಲ್ಲಿ ಬಂದ ಮಾಹಿತಿ ನೀಡುತ್ತಾಳೆ. ಆದರೆ ಆನ್ ಲೈನ್ ಕ್ಲಾಸ್ ಗೆ ಫೋನ್ ಕೊಡುವು ದಿಲ್ಲ.ಆ ಸಮಯದಲ್ಲಿ ಅವಳಿಗೂ ಕ್ಲಾಸ್ ಇರುತ್ತದೆ.
ಸಮಸ್ಯೆ-4
ಇವಳೂ ಹತ್ತನೇ ತರಗತಿ.ಅವಳ ಮನೆಯಲ್ಲೂ ಫೋನ್ ಇಲ್ಲ.ಪಕ್ಕದ ಮನೆಯವಳ ನಂಬರ್ ಕೊಟ್ಟಿದ್ದಾಳೆ.ಆದರೆ ಅವರ ಮನೆಯವರೂ ಸ್ಥಿತಿ ವಂತರೇನಲ್ಲ.ಅವಳು ಹಾಕಿಸಿಕೊಳ್ಳುವ ಒಂದು GB ಡೇಟಾ ಇವಳ ನಾಲ್ಕು ತರಗತಿಗಳಿಗೇ ಖರ್ಚಾದರೆ ಏನು ಮಾಡುವುದು? ಹೀಗಾಗಿ ಕ್ಲಾಸ್ ಪ್ರಾರಂಭ ವಾದ ತಕ್ಷಣ ಜಾಯಿನ್ ಆಗುವ ಅವಳು ಐದು ನಿಮಿಷದ ನಂತರ ಎಕ್ಸಿಟ್ ಆಗುತ್ತಾಳೆ.
ಸಮಸ್ಯೆ-5
ಮನೆಯಲ್ಲಿ ಇರುವುದು ಒಂದೇ ಅಂಡ್ರಾಯ್ಡ್ ಫೋನ್ ಅಪ್ಪ ಬೋಟ್ ಗೆ ಹೋಗುವಾಗ ಕೊಂಡೊಯ್ಯುತ್ತಾರೆ. ಫೋನನ್ನು ಮನೆಯಲ್ಲಿಡಲು ಸಾಧ್ಯವಿಲ್ಲ. ಗಾಳಿ, ಮಳೆ, ಹವಾಮಾನ ವರದಿ, ಬೋಟ್ ಮಾಲಿಕರ ಫೋನ್ ಮುಂತಾದ ಕೆಲಸಕ್ಕೆ ಆ ಫೋನ್ ಬೇಕು. ಆನ್ ಲೈನ್ ಕ್ಲಾಸ್ ಗಿಂತ ಜೀವ ದೊಡ್ಡದಲ್ಲವೇ?
ಸಮಸ್ಯೆ-6
ಅವನಿಗೆ ಅಪ್ಪ ಇಲ್ಲ. ಅಮ್ಮ ಮೀನು ಕೊಯ್ದು ಕೊಡಲು ಹೋಗುತ್ತಾಳೆ.ಅಕ್ಕನ ಗಂಡನ ಬಳಿ ಫೋನ್ ಇದೆ. ಶಾಲೆಯಿಂದ ಬಂದ ಮೆಸೆಜ್ ಏನಾದರೂ ವಿಷಯ ಹೇಳುವುದಿದ್ದರೆ ಹೇಳುತ್ತಾನೆ. ಆದರೆ ಫೋನ್ ಕೊಡು ಎನ್ನುವುದು ಹೇಗೆ. ?
ಟೀಚರ್ ಮೊಬೈಲ್ ಒಡೆದಿದೆ.ಟಚ್ ಆಗ್ತಿಲ್ಲ. ಟೀಚರ್ ಅಣ್ಣ ಮೊಬೈಲ್ ಕೊಡೋದಿಲ್ಲ. ಟೀಚರ್ ಡೇಟಾ ಖಾಲಿಯಾಗಿದೆ.ಅಪ್ಪನಿಗೆ ಹೇಳಿದ್ದೆ. ಅಪ್ಪನ ಬಳಿ ದುಡ್ಡಿಲ್ಲವಂತೆ.ಇದು ಪ್ರತಿದಿನದ ಸಮಸ್ಯೆ.
ನಾನು ಹತ್ತನೇ ತರಗತಿಯ ವರ್ಗ ಶಿಕ್ಷಕಿ. ಇರುವುದು ಕೇವಲ ಹದಿನೆಂಟು ವಿದ್ಯಾರ್ಥಿಗಳು.ಆದರೆ ಕ್ಲಾಸ್ ಗೆ ಹಾಜರಾಗುವುದು ಕೇವಲ ಎಂಟರಿಂದ ಹತ್ತು ವಿದ್ಯಾರ್ಥಿಗಳು.ಹಾಜರಾದರೂ ನೆಟ್ ವರ್ಕ್ ಸರಿ ಇರದೇ ಅವರಿಗೆ ಏನೂ ಕೇಳಿರುವುದಿಲ್ಲ.ಬೀಚ್ ಗೆ ಹೋದರೆ ನೆಟ್ ಸಿಗುತ್ತದೆಯಾದರೂ ಗೋವಾ ರಾಜ್ಯದ್ದು. ಹೀಗಾಗಿ ರೋಮಿಂಗ್ ಆಗುತ್ತದೆ. ಮಕ್ಕಳು ಫೋನ್ ಇಲ್ಲದೇ ಮುಖ ಚಿಕ್ಕದು ಮಾಡು ವಾಗಲೆಲ್ಲ ಹೊಟ್ಟೆ ಉರಿಯುತ್ತದೆ.
ಮೀನು ಮಾರಾಟ ಮಾಡಿಯೋ ಮಾರುಕಟ್ಟೆಯಲ್ಲಿ ಗ್ರಾಹಕರು ಕೊಂಡುಕೊಂಡ ಮೀನನ್ನು ಕೊಯ್ದೋ ಜೀವನ ನಡೆಸುವ ತಾಯಂದಿರಿಗೆ ಹೇಗೆ ಮೊಬೈಲ್ ಕೊಡಿಸಲೇಬೇಕು ಎಂದು ಹೇಳುವುದು? ಅರ್ಥವಾ ಗುತ್ತಿಲ್ಲ.ಸುಮ್ಮನೆ ಬರೆದು ನಿಮ್ಮೆದುರಿಗೆ ಇಟ್ಟಿರುವೆ. ಪರಿಹಾರವೇನು?
(ಇದು ಕಾರವಾರದ ಶಿಕ್ಷಕಿ ಶ್ರೀದೇವಿ ಕೆರೆಮನೆ ಅವರು ಫೇಸ್ ಬುಕ್ ನಲ್ಲಿ ಬರೆದಿದ್ದ ಬರಹ)