ನಿವೃತ್ತರಾದರು ಕಾಯಕ ಬಿಡದ ಶ್ಯಾಮಣ್ಣ ಮೇಷ್ಟ್ರು – ಪ್ರತಿದಿನ ಶಾಲೆಗೆ ಹೋಗಿ ಮಕ್ಕಳಿಗೆ ಹೊಸದೊಂದು ಪ್ರಯೋಗ ಮಾಡುತ್ತಾ ಮಕ್ಕಳಿಗೆ ಪಾಠ ಬೋಧನೆ…..

Suddi Sante Desk

ಹನುಮಸಾಗರ –

ಶ್ಯಾಮಣ್ಣ ಮೇಷ್ಟ್ರು ಮನೆಗೆ ಅಂದ್ರೆ ಮಕ್ಕಳು ಖುಷ್ ಖುಷಿಯಾಗಿ ಓಡೋಡಿ ಬರುತ್ತಾರ.ಹಾಗೆ ಬಂದವರಿಗೆ ಮರಳಿ ಮನೆಗೆ ಹೋಗುವ ಮನಸ್ಸೆ ಬಾರದು.ಪಾಲಕರು ಕರೆಯಲು ಬಂದಾಗಲೇ ‌ಮಕ್ಕಳಿಗೆ ತಮ್ಮ ಮನೆಯ ನೆನಪಾಗುವುದು.ಕುಷ್ಟಗಿಯಲ್ಲಿ ನೆಲೆಸಿರುವ 67ರ ಹರೆಯದ ಶ್ಯಾಮರಾವ್ ಕುಲಕರ್ಣಿ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಪ್ರೌಢ ಶಾಲಾ ಶಿಕ್ಷಕರಾಗಿ ಪದೋನ್ನತಿ ಹೊಂದಿ ಈಗ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.2016 ರಲ್ಲಿಯೇ ಸೇವೆಯಿಂದ ನಿವೃತ್ತಿಯಾದರೂ ಪ್ರವೃತ್ತಿಯಿಂದ ಮಾತ್ರ ನಿವೃತ್ತರಾಗದೇ ಪ್ರತಿ ದಿನ ಶೈಕ್ಷಣಿಕ ಬೆಳವಣಿಗೆಗೆ ಏನಾದರೊಂದು ಪ್ರಯೋಗ ಮಾಡುತ್ತಲೇ ಇರುತ್ತಾರೆ. ಶಾಲೆ ಇರುವಾಗ ನಿತ್ಯ ಒಂದೊಂದು ಶಾಲೆಗೆ ಹೋಗಿ ವಿಜ್ಞಾನ ಬೋಧನೆಯ ಜತೆಗೆ ಮಕ್ಕಳ ತಾರ್ಕಿಕ ಜ್ಞಾನಕ್ಕೆ ಇಂಬುಕೊಟ್ಟು ಬರುತ್ತಾರೆ. ಮನೆಯಲ್ಲಿದ್ದಾಗ ಅಕ್ಕರೆ ಯಿಂದ ತಮ್ಮೊಂದಿಗೆ ಬರುವ ಮಕ್ಕಳೊಂದಿಗೆ ತಾವೂ ಮಗುವಾಗಿ ಆಟವಾಡುತ್ತಾ ಮಕ್ಕಳಿಗೆ ಅವರಿಗೆ ಅರಿವಿಲ್ಲ ದಂತೆ ವಿಜ್ಞಾನದ ವನ್ನು ಕಲಿಸುತ್ತಾರೆ.ಇದಕ್ಕೆಲ್ಲ ಅವರ ಶ್ರೀಮತಿಯವರ ಸಹಕಾರವೂ ಇದೆ.

ಇವರ ಮನೆಯಲ್ಲಿ ಯಾವ ಭಾಗದಲ್ಲಿ ನೋಡಿದರೂ ಬೊಂಬೆಗಳು,ಆಟಿಕೆಗಳು,ವಿಜ್ಞಾನ ಕಲಿಕೆಗೆ ನೆರವಾಗು ವಂತೆ ತಾವೇ ತಯಾರಿಸಿದ ಸಾಧನಗಳು,ಮತ್ತಷ್ಟು ಸಾಧನ ತಯಾರಿಸುವುದಕ್ಕಾಗಿ ಸಂಗ್ರಹಿಸಿಟ್ಟ ರಟ್ಟು,ಬಿದಿರು, ಅಂಟು,ಥರ್ಮೋಕೋಲ್,ಹಳೆಯ ಬಟ್ಟೆ,ಹತ್ತಿ,ಹೀಗೆಲ್ಲ ಕಚ್ಚಾ ವಸ್ತುಗಳು ತುಂಬಿಕೊಂಡಿವೆ.

ಬೊಂಬೆಗಳೆಂದರೆ ಏನೋ ಇವು ಸಣ್ಣಪುಟ್ಟ ಸಾಮಾನ್ಯ ಬೊಂಬೆಗಳು ಅಂತಲ್ಲ.ಕೀಲಿಬೊಂಬೆ,ಮಾತನಾಡುವ ಬೊಂಬೆ,ನಗಿಸುವ ಬೊಂಬೆ,ಮಾತನಾಡಿಸುವ ಬೊಂಬೆ, ವಿಜ್ಞಾನದ ತಾರ್ಕಿಕ ತಿಳಿಸುವ ಬೊಂಬೆ, ಒತ್ತಡ, ಗಾಳಿ, ಬೆಳಕು, ಗುರುತ್ವಾಕರ್ಷಣೆ, ಬೆಳಕಿನ ಸಂಯೋಜನೆ ಹೀಗೆಲ್ಲ ವಿವಿಧ ವಿಷಯಗಳನ್ನು ಕಲಿಸುವ ಬೊಂಬೆಗಳು ಇವು. ಈ ಬೊಂಬೆಗಳನ್ನು ಇಡುವುದಕ್ಕಾಗಿಯೇ ಒಂದು ಬಾಡಿಗೆ ಮನೆ ಹಿಡಿದಿದ್ದಾರೆ.ಮಕ್ಕಳ ಮನಸ್ಸನ್ನು ತಮ್ಮೆಡೆಗೆ ಸೆಳೆ ಯುವ ಹಾಗೂ ಅವರಲ್ಲಿ ಏಕಾಗ್ರತೆ ಮೂಡಿಸುವ ಕೌಶಲ್ಯ ಈ ಮೇಷ್ಟ್ರಿಗೆ ಕರಗತವಾಗಿದೆ.

ವಿಜ್ಞಾನ ವಿಷಯವನ್ನು ಸರಳವಾಗಿ ಬೋಧಿಸುತ್ತೇನೆ ಬನ್ನಿರೋ ಎಂದರೆ ಮಕ್ಕಳು ಬರುವುದಿಲ್ಲ.ಮಕ್ಕಳೇ ನಿಮ್ಮ ಕೈಗೆ ಬೊಂಬೆಗಳನ್ನು ನೀಡುತ್ತೇನೆ ಆಟವಾಡಲು ಬರ್ರಿ ಎಂದರೆ ಓಡೋಡಿ ಬರುತ್ತಾರೆ.ಹೀಗೆ ಬಂದವರು ಈ ಬೊಂಬೆ ಹೀಗೇಕೆ ಮಾಡುತ್ತದೆ ಅದೇಕೆ ಓಲಾಡುತ್ತದೆ ಇದೇಕೆ ಬೀಳುವುದಿಲ್ಲ ಅದೇಕೆ ಬಾಗಿ ನಿಂತಿದೆ ಇಂತಹ ತರಹೆವಾರಿ ಪ್ರಶ್ನೆಗಳನ್ನು ಕೇಳಲು ಆರಂಭಿಸುತ್ತಾರೆ. ಅವರು ಕೌತುಕವಾಗಿ ಕೇಳುವ ಪ್ರಶ್ನೆಗಳಿಗೆ ಉತ್ಸಾಹದಿಂದ ನನ್ನ ಉತ್ತರ ಬರುತ್ತದೆ ಅದೇ ಮಕ್ಕಳಿಗೆ ಸರಳ ಕಲಿಕೆಯ ಪಾಠವಾಗುತ್ತದೆ’ ಎಂದು ಶ್ಯಾಮಣ್ಣ ಮೇಷ್ಟ್ರು ಖುಷಿ ಯಿಂದ ಹೇಳುತ್ತಾರೆ.

ರಾಜ್ಯಮಟ್ಟದ ಸಂಪನ್ಮೂಲ ಶಿಕ್ಷಕರಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ತರಬೇತಿ ನೀಡಿದ್ದರು ಆದರೆ ನಿವೃತ್ತಿಯಾದ ಬಳಿಕ ಈಗ ಹೆಚ್ಚಾಗಿದೆ.ಸ್ಥಳೀಯ ಕಚ್ಚಾವಸ್ತು ಬಳಸಿ ತಾವೇ ವಿಜ್ಞಾನ,ಗಣಿತದ ಮಾದರಿಗಳನ್ನು ತಯಾರಿಸುತ್ತಾರೆ. ಇದೆಲ್ಲವನ್ನು ಮಕ್ಕಳಿಗಾಗಿಯೇ ನಿರ್ವಹಿಸಿದ್ದು ಮಕ್ಕಳ ಪಾಲಿಗೆ ಇವರ ಮನೆ ಮಿನಿ ವಿಜ್ಞಾನ ಪ್ರಯೋಗಾಲಯವು ಹೌದು ಆಟಿಕೆ ಮನೆಯೂ ಹೌದು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.