ಬೆಂಗಳೂರು –
ಈಡೇರದ ಬೇಡಿಕೆ; ಮತ್ತೆ ಸಾರಿಗೆ ನೌಕರರ ಮುಷ್ಕರ, ಐದು ದಿನ ಈ ಜಿಲ್ಲೆಗಳಲ್ಲಿ ಇರಲ್ಲ ಬಸ್ ಸೇವೆ ಹೌದು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ ನಾಲ್ಕು ನಿಗಮಗಳ ನೌಕರರು ಮತ್ತೆ ಸಾರಿಗೆ ಮುಷ್ಕರ ನಡೆಸಲು ಸಿದ್ಧತೆ ಆರಂಭಿಸಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೊದಲ ಹಂತದಲ್ಲಿ ಅ.15 ರಿಂದ 19 ರವರೆಗೆ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ
ಆ.5 ರಂದು ನಾಲ್ಕೂ ನಿಗಮದ ನೌಕರರು ಸಾರಿಗೆ ಮುಷ್ಕರಕ್ಕೆ ಮುಂದಾಗಿದ್ದರು.ಹೈಕೋರ್ಟ್ ಆದೇಶದ ಹಿನ್ನೆಲೆ ಮುಷ್ಕರ ವಾಪಸ್ ಪಡೆಯಲಾಗಿತ್ತು. ಮಾತುಕತೆ ಮೂಲಕ ಬೇಡಿಕೆ ಈಡೇರಿಸಿಕೊಳ್ಳುವಂತೆ ಸೂಚಿಸಿತ್ತು. ಆದರೆ, ಇಲ್ಲಿಯವರೆಗೆ ರಾಜ್ಯ ಸರ್ಕಾರ ಸಾರಿಗೆ ನೌಕರರ ಬೇಡಿಕೆ ಈಡೇರಿಸಿಲ್ಲ,ಕನಿಷ್ಠ ಮಾತುಕತೆಗೂ ಕರೆದಿಲ್ಲ. ಆದ್ದರಿಂದ ಮುಷ್ಕರಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಹೇಳಿದೆ.
38 ತಿಂಗಳ ಹಿಂಬಾಕಿ ಬಿಡುಗಡೆ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದೆ.ಅ. 15ರಿಂದ 19ರವರೆಗೆ ಬೆಂಗಳೂರು, ಹುಬ್ಬಳ್ಳಿ ಹಾಗೂ ಕಲಬುರಗಿ ನಗರಗಳಲ್ಲಿ ಐದು ದಿನಗಳ ಕಾಲ ನಾಲ್ಕು ಸಾರಿಗೆ ನಿಗಮ ಎಂಬಗಳ ನೌಕರರು ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ.
ಜಂಟಿ ಕ್ರಿಯಾ ಸಮಿತಿಯು ಆಗಸ್ಟ್ 11 ಮತ್ತು ಸೆ. 15ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಶೀಘ್ರವೇ ಸಭೆ ಕರೆದು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿತ್ತು. ಆದರೆ, ಸರ್ಕಾರ ಈವರೆಗೂ ಮಾತುಕತೆ ನಡೆಸದೇ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಚ್.ವಿ. ಅನಂತ ಸುಬ್ಬರಾವ್ ಆರೋಪಿಸಿದ್ದಾರೆ.
ಆ. 5 ರಂದು ಸಾರಿಗೆ ನೌಕರರ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದಾಗ ರಾಜ್ಯ ಸರ್ಕಾರ ಮುಷ್ಕರ ಹತ್ತಿಕ್ಕಲು ಎಸ್ಮಾ ಜಾರಿ ಮಾಡಿತ್ತು. ಎಸ್ಮಾಸ್ತ್ರಕ್ಕೂ ತಲೆ ಕೆಡಿಸಿಕೊಳ್ಳದ ಸಾರಿಗೆ ನೌಕರರು ಮುಷ್ಕರಕ್ಕೆ ಸಿದ್ಧತೆ ನಡೆಸಿದ್ದರು. ಆ.4 ರಂದು ಸಾರಿಗೆ ಮುಷ್ಕರ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.
ಎಸ್ಮಾ ಜಾರಿಗೊಳಿಸುವಾಗ ಮುಷ್ಕರ ನಡೆಸುವುದು ಕಾನೂನುಬಾಹಿರ. ಜನಸಾಮಾನ್ಯರ ಕಷ್ಟವನ್ನು ನೀವು ಗಮನಕ್ಕೆ ತೆಗೆದುಕೊಳ್ಳಬೇಕು ಎಂದು ಕಾರ್ಮಿಕ ಸಂಘಟನೆಗಳಿಗೆ ಹೈಕೋರ್ಟ್ ತಿಳಿಹೇಳಿತ್ತು. ಅದೇ ರೀತಿ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸುವಂತೆ ಸರ್ಕಾರಕ್ಕೂ ಸೂಚನೆ ನೀಡಿತ್ತು.
ಆ.5ರಂದು ಮುಷ್ಕರ ನಡೆಸದಂತೆ ಹೈಕೋರ್ಟ್ ಆದೇಶ ನೀಡಿತ್ತು. ಆ ಬಳಿಕ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಷ್ಕರ ಹಿಂಪಡೆದಿತ್ತು. ನ್ಯಾಯಾಲ ಯದ ಆದೇಶದಂತೆ ಮಾತುಕತೆಗೆ ಜಂಟಿ ಕ್ರಿಯಾ ಸಮಿತಿ ಒಲವು ತೋರಿದರೂ ಸರ್ಕಾರದಿಂದ ಯಾವುದೇ ಆಹ್ವಾನ ಬಂದಿರಲಿಲ್ಲ. ಇದರಿಂದ ಬೇಸರಗೊಂಡ ಸಾರಿಗೆ ನೌಕರರ ಸಂಘಟನೆಗಳು ಹಂತ ಹಂತವಾಗಿ ಮುಷ್ಕರ ತೀವ್ರಗೊಳಿಸಲು ನಿರ್ಧರಿಸಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..