ಬೆಂಗಳೂರು –
ಹೌದು ಶಿಕ್ಷಕರ ಮೇಲೆ ಅನಗತ್ಯ ಒತ್ತಡ ಹೇರುತ್ತಿರುವ ಕ್ಷೇತ್ರ ಶಿಕ್ಷಣ ಅಧಿಕಾರಿ (ಬಿಇಒ) ಹನುಮಂತರಾಯಪ್ಪ ಅವರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಸರ್ಕಾರಿ ನೌಕರರ ಸಂಘ ಹಾಗೂ ತಾಲ್ಲೂಕು ಶಿಕ್ಷಕರ ಸಂಘದ ಪದಾಧಿಕಾರಿಗಳು ಡಿಡಿಪಿಐ ಹಾಗೂ ಬಿಇಒ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.ಬಿಇಒ ಒತ್ತಡದಿಂದಲೇ ಶಿಕ್ಷಕ ಸುಬ್ಬರಾಯಪ್ಪ ಹೃದಯಾಘಾತ ದಿಂದ ಸಾವನ್ನಪ್ಪಿದ್ದಾರೆ.
ಶಿಕ್ಷಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಮತ್ತು ಅನವಶ್ಯಕವಾಗಿ ಒತ್ತಡ ಹೇರುವ ಬಿಇಒ ವರ್ಗಾವಣೆ ಮಾಡದಿದ್ದರೆ ಸೆ.5ರಂದು ನಡೆಯುವ ಶಿಕ್ಷಕರ ದಿನಾಚರಣೆ ಬಹಿಷ್ಕಾರ ಮಾಡಲಾಗುವುದು ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಿಕ್ಷಕರು ಎಚ್ಚರಿಕೆ ನೀಡಿದರು.ತಾಲ್ಲೂಕಿನ ಕಸಬಾ ವ್ಯಾಪ್ತಿಯ ಮಾರಿಬೀಳು ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಸುಬ್ಬರಾಯಪ್ಪ ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದು, ಶಿಕ್ಷಕರ ಸಾವಿಗೆ ಬಿಇಒ ಅವರ ಒತ್ತಡವೇ ಕಾರಣವಾಗಿದೆ ಎಂದು ಶಿಕ್ಷಕರು ದೂರಿದರು.
‘ಬಿಇಒ ಹನುಮಂತರಾಯಪ್ಪ ಅವರು ಶಿಕ್ಷಕರಿಗೆ ಕಿರುಕುಳ ನೀಡುವುದು ಹಾಗೂ ಮಹಿಳಾ ಶಿಕ್ಷಕಿಯರಿಗೆ ಏಕವಚನದಲ್ಲಿ ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರಿಗೆ ಮಾನಸಿಕ ಹಿಂಸೆ ಮತ್ತು ದಬ್ಬಾಳಿಕೆ ನಡೆಸು ವುದು ಸಾಮಾನ್ಯವಾಗಿದೆ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಂಗಪ್ಪ ಆರೋಪ ಮಾಡಿದರು.
ಶಿಕ್ಷಕರಲ್ಲಿ ಬಿಇಒ ಅವರು ಭಯದ ವಾತಾವರಣ ಸೃಷ್ಟಿಸಿದ್ದಾರೆ. ಸಣ್ಣಪುಟ್ಟ ವಿಚಾರಗಳಿಗೂ ನೋಟಿಸ್ ನೀಡುತ್ತಿದ್ದಾರೆ. ತಕ್ಷಣ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂಜಯ ಆಗ್ರಹಿಸಿ ದರು
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ನಟರಾಜು, ನರಸಿಂಹಮೂರ್ತಿ, ಶಿವಕುಮಾರ್, ಶಶಿಕುಮಾರ್, ರಘು, ರಾಮದಾಸು, ರಮೇಶ್, ದೇವರಾಜು, ಹನುಮಂತರಾಜು, ಲಕ್ಷ್ಮಿರಂಗಯ್ಯ, ರಂಗಧಾಮಯ್ಯ, ಸಿದ್ದೇಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸುದ್ದಿ ಸಂತೆ ನ್ಯೂಸ್ ಮಧುಗಿರಿ…..