ಬೆಂಗಳೂರು –
ಪ್ರಾಥಮಿಕ ಶಾಲಾ ಶಿಕ್ಷಕರ ಪಠ್ಯೇತರ ಹೊರೆ ಇಳಿಸಿ
ಶೈಕ್ಷಣಿಕ ಚಟುವಟಿಕೆಯ ಮಧ್ಯೆ ಸರಕಾರ ಸಾಲು ಸಾಲು ಅನ್ಯ ಚಟುವಟಿಕೆ ಭಾರವನ್ನು ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರ ಹೆಗಲ ಮೇಲೆ ಹೊರಿ ಸುತ್ತಿರುವುದರಿಂದ ಶಿಕ್ಷಕರ ಪಠ್ಯ ಕೆಲಸ ಮತ್ತು ಪಠ್ಯೇತರ ಕೆಲಸಗಳ ನಡುವಿನ ಸಮತೋಲನ ತಪ್ಪಿದ್ದು, ಇದು ಮಕ್ಕಳ ಶೈಕ್ಷಣಿಕ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತಿದೆ.
2024-25ರ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರಕಾರವು ಶಾಲಾ ಶಿಕ್ಷಕರಿಗೆ ಪಾಠ ಮಾಡುವುದನ್ನು ಹೊರತುಪಡಿಸಿ 160 ಕೆಲಸಗಳನ್ನು ಹಚ್ಚಿದೆ.ಅಕ್ಷರ ದಾಸೋಹದಿಂದ ಹಿಡಿದು ಸಸ್ಯ ಶ್ಯಾಮಲಾ ಯೋಜನೆಯ ತನಕದ ಲೆಕ್ಕ ನಿರ್ವಹಣೆ, ಮಾಹಿತಿ ನೀಡುವುದು, ಉಸ್ತುವಾರಿ ನಿರ್ವಹಣೆಗಳೆಲ್ಲವನ್ನೂ ಶಿಕ್ಷಕರೇ ಮಾಡಬೇಕಿದೆ.
ಇದು ಶಿಕ್ಷಕರ ದಕ್ಷತೆಯ ಮೇಲೆ ಮಾತ್ರವಲ್ಲದೇ ಮಕ್ಕಳ ಕಲಿಕೆಯ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಈಗಾಗಲೇ ಸುಮಾರು 50 ಸಾವಿರ ಶಿಕ್ಷಕರ ಕೊರತೆ ಇದ್ದು, ಉಳಿದ ಶಿಕ್ಷಕರ ಮೇಲೆ ಬಿದ್ದಿರುವ ಈ ಕೆಲಸದ ಹೊರೆ ಅವರನ್ನು ಮತ್ತಷ್ಟು ಕುಗ್ಗಿಸಿದೆ.ಪ್ರತೀ ದಿನ ಅಜೀಂ ಪ್ರೇಮ್ ಜೀ ಪ್ರತಿಷ್ಠಾನದ ನಿತ್ಯ ಮೊಟ್ಟೆ, ಶೇಂಗಾ ಚಿಕ್ಕಿ, ಬಾಳೆಹಣ್ಣು ವಿತರಣೆಯ ಮಾಹಿತಿ ದಾಖಲಿಸುವುದು,
ರಾಗಿ ಮಾಲ್ಟ್ ವಿತರಣೆ ಮಾಹಿತಿ, ಸುವರ್ಣ ಆರೋಗ್ಯ ಚೈತನ್ಯ ಮಾಹಿತಿ, ಸೈಕಲ್ ವಿತರಣೆ ಮಾಹಿತಿ, ಪಠ್ಯ ಪುಸ್ತಕ ವಿತರಣೆ ಮತ್ತು ಸಮವಸ್ತ್ರ, ವಿತರಣೆ ಮತ್ತದರ ಮಾಹಿತಿಯನ್ನು ಸ್ಯಾಟ್ಸ್‌ನಲ್ಲಿ ದಾಖಲಿಸುವುದು, ಶಾಲಾ ಪ್ರಾರಂಭೋತ್ಸವ ಮಾಹಿತಿ ಸಲ್ಲಿಕೆ, ದಾಖಲಾತಿ ಆಂದೋಲನ ನಡೆಸುವುದು ಮತ್ತು ಮಾಹಿತಿ ಸಲ್ಲಿಸುವ ಕೆಲಸ ಸೇರಿ 160 ಪಠ್ಯೇತರ ಜವಾಬ್ದಾರಿಗಳನ್ನು ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ನಿರ್ವಹಿಸುತ್ತಿದ್ದಾರೆ.
ಶಿಕ್ಷಕರಿಗೆ ಅನ್ಯ ಕೆಲಸಗಳನ್ನು ನೀಡಬೇಡಿ ಎಂದು ಶಿಕ್ಷಕರು, ಶಿಕ್ಷಣ ತಜ್ಞರು ಒತ್ತಾಯ ಮಾಡುತ್ತಿದ್ದರೂ ಸರಕಾರ ಅದಕ್ಕೆ ಸ್ಪಂದಿಸುತ್ತಿಲ್ಲ. ಪ್ರತೀ ಶೈಕ್ಷಣಿಕ ವರ್ಷ ದಲ್ಲಿಯೂ ಶಿಕ್ಷಕರ ಮೇಲಿನ ಕೆಲಸದ ಹೊರೆ ಹೆಚ್ಚುತ್ತಲೇ ಇದೆಯೇ ಹೊರತು ಅದನ್ನು ಕಡಿಮೆ ಮಾಡುವ ಪ್ರಯತ್ನ ನಡೆದಿಲ್ಲ ಇದರಿಂದಾಗಿ ಶಿಕ್ಷಣದ ಗುಣಮಟ್ಟವೂ ಪ್ರತೀ ವರ್ಷವೂ ಕುಸಿಯುತ್ತ ಸಾಗುತ್ತಿರುವುದು ಗೋಚರ ವಾಗುತ್ತಿದೆ.
ಶಿಕ್ಷಕರ ಮೇಲಿನ ಹೊರೆ ತಗ್ಗಿಸಲು ಮಾರ್ಗೋ ಪಾಯ ಗಳನ್ನು ಸರಕಾರ ಕಂಡುಕೊಳ್ಳಬೇಕಿದೆ. ಇದಕ್ಕಾಗಿ ಪ್ರಾಥಮಿಕ ಶಿಕ್ಷಣಕ್ಕೆ ಅಗತ್ಯವಿರುವ ಶಿಕ್ಷಕರನ್ನು ತತ್ ಕಣವೇ ನೇಮಕ ಮಾಡಿಕೊಳ್ಳಬೇಕು. ಇಲ್ಲವೇ, ಪಠ್ಯೇತರ ಜವಾಬ್ದಾರಿಗಳನ್ನು ಕಡಿತ ಮಾಡಬೇಕು ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ಇತರ ಅನ್ಯ ಇಲಾಖೆ ಗಳಿಗೆ ಈ ಜವಾಬ್ದಾರಿಯನ್ನು ವಹಿಸಬೇಕು.
ಇದೂ ಆಗದಿದ್ದರೆ, ಸರಕಾರಿ ಶಾಲೆಗಳಿಗೆ ಗುತ್ತಿಗೆ ಆಧಾರದ ಮೇಲೆ ಡಿ-ಗ್ರೂಪ್‌ನಡಿ ಅಟೆಂಡರ್ ಅಥವಾ ಕ್ಲರ್ಕ್ ಮಾದರಿಯಲ್ಲಿ ಒಬ್ಬೊಬ್ಬ ಸಿಬಂದಿಯನ್ನು ನೇಮಕ ಮಾಡಬೇಕು. ಆಗ ಶಿಕ್ಷಕರ ಮೇಲಿನ ಹೊರೆ ತಗ್ಗಿ, ಅವರು ತಮ್ಮ ಪ್ರಾಥಮಿಕ ಜವಾಬ್ದಾರಿಯಾದ ಬೋಧನೆಯತ್ತ ಗಮನಹರಿಸಲು ಸಾಧ್ಯವಾಗಲಿದೆ
ಭವಿಷ್ಯದ ಪ್ರಜೆಗಳನ್ನು, ಪ್ರಜ್ಞಾವಂತ ನಾಗರಿಕರನ್ನು ರೂಪಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಶಿಕ್ಷಕರಿಗೆ ಅನ್ಯ ಕೆಲಸ ಹೊರೆ ಹೊರಿಸುವುದು ಎಷ್ಟರ ಮಟ್ಟಿಗೆ ಸರಿ. ವೈಜ್ಞಾನಿಕವಾಗಿಯೂ ಇದು ತಪ್ಪು ನಿರ್ಧಾರ ಎನಿಸಿಕೊಳ್ಳುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಶಿಕ್ಷಕರ ಮೇಲಿನ ಪಠ್ಯೇತರ ಜವಾಬ್ದಾರಿಗಳಿಂದಾಗಿ ಮಕ್ಕಳ ನ್ಯಾಯಯುತ ಕಲಿಕೆ ಮೂಲಭೂತ ಹಕ್ಕನ್ನು ಕಸಿದುಕೊಂಡಂತಾಗುತ್ತದೆ ಎಂಬುದನ್ನು ಸರಕಾರ ಮರೆಯಬಾರದು
ಹಾಗಾಗಿ, ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ತಜ್ಞರ ಸಮಿತಿಯನ್ನು ರಚಿಸಿ, ಶಿಕ್ಷಕರ ಮೇಲಿನ ಪಠ್ಯೇತರ ಹೊರೆಯನ್ನು ತಗ್ಗಿಸುವ ಕುರಿತು ಕಾರ್ಯಸಾಧುವಾದ ಪರಿಹಾರವನ್ನು ಕಂಡುಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ, ಮಕ್ಕಳ ಕಲಿಕೆಯ ಮೇಲಿನ ಪರಿಣಾಮ ದೀರ್ಘಾವಧಿಯಲ್ಲಿ ಸಮಾಜದ ಮೇಲೂ ಆಗಲಿದೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..