ಬೆಂಗಳೂರು-
ಸರ್ಕಾರಿ ನೌಕರರ ಬೇಡಿಕೆಗಳ ಕುರಿತು ನೋಡೊ ದಾದರೆ ನಿಗದಿತ ಅವಧಿಯಲ್ಲಿ ವೇತನ, ಭತ್ಯೆಗಳನ್ನು ಪಾವತಿಸುವುದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಸರ್ಕಾರಿ ಸ್ವಾಮ್ಯದ ನಿಗಮ- ಮಂಡಳಿ, ಪ್ರಾಧಿಕಾರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ ನೌಕರರಿಗೆ ಸಕಾಲದಲ್ಲಿ ವೇತನ ಪಾವತಿಯಾ ಗುತ್ತಿಲ್ಲ.
ಇದರಿಂದ ಕುಟುಂಬ ನಿರ್ವಹಣೆ, ಮನೆ ಬಾಡಿಗೆ, ಮಕ್ಕಳ ಶೈಕ್ಷಣಿಕ ಶುಲ್ಕ, ಸಾಲದ ಕಂತುಗಳ ಪಾವತಿ, ವಿಮಾ ಪಾಲಿಸಿ ಕಂತುಗಳ ಪಾವತಿಯಲ್ಲಿ ವಿಳಂಬವಾಗುವುದ ರಿಂದ ಸಾಲದ ಮೇಲಿನ ಬಡ್ಡಿ ಸೇರಿದಂತೆ ಹೆಚ್ಚುವರಿ ದಂಡ ಪಾವತಿಸಬೇಕಾಗುತ್ತದೆ ಹಾಗೂ ಇನ್ನಿತರ ದೈನಂದಿನ ಖರ್ಚು/ ವೆಚ್ಚಗಳನ್ನು ನಿರ್ವಹಿಸುವಲ್ಲಿ ಸರ್ಕಾರಿ ನೌಕರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಆದ್ದರಿಂದ, ಎಲ್ಲಾ ಇಲಾಖೆಗಳ ಹಾಗೂ ನಿಗಮ-ಮಂಡಳಿ, ಸ್ವಾಯತ್ತ ಸಂಸ್ಥೆಗಳ ಅಧಿಕಾರಿ/ ನೌಕರರಿಗೆ ಪ್ರತಿ ಮಾಸಿಕದ ಮೊದಲ ವಾರದಲ್ಲಿಯೇ ವೇತನ/ ಭತ್ಯೆಗಳನ್ನು ಪಾವತಿ ಮಾಡಲು ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಬೇಕು.ಕರ್ನಾಟಕ ರಾಜ್ಯ 7ನೇ ವೇತನ ಆಯೋಗದ 2ನೇ ವರದಿಯನ್ನು ಬಿಡುಗಡೆಗೊಳಿಸಿ ವರದಿಯಲ್ಲಿನ ಶಿಫಾರಸ್ಸುಗಳು ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಸೂಚಿಸಿರುವ ಅಂಶಗಳನ್ನು ಅನುಷ್ಠಾನ ಗೊಳಿಸಬೇಕು ಎಂದು ಸರ್ಕಾರದ ಮುಂದೆ ಬೇಡಿಕೆ ಇಡಲಾಗುತ್ತದೆ.
ಇಲಾಖೆಗಳ ಅಧಿಕಾರಿ/ ನೌಕರರ ಜೇಷ್ಠತಾ ಪಟ್ಟಿ ಪ್ರಕಟಿಸುವುದು. ಹಲವು ಇಲಾಖೆಗಳು ಕಾಲ-ಕಾಲಕ್ಕೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ- ನೌಕರರ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸದೇ ಇರುವು ದರಿಂದ ಮುಂಬಡ್ತಿ ಸೇರಿದಂತೆ ಇತರೆ ಸೇವಾ ಸೌಲಭ್ಯ ಗಳಿಂದ ವಂಚಿರಾಗುತ್ತಿದ್ದಾರೆ.
ಸರ್ಕಾರ ಪ್ರತಿವರ್ಷ ಇಲಾಖೆಯ ವೃಂದವಾರು ಜೇಷ್ಠತಾ ಪಟ್ಟಿ ಪ್ರಕಟಿಸುವಂತೆ ಸುತ್ತೋಲೆ ಹೊರಡಿಸಿದ್ದಾಗ್ಯೂ ಹಲವು ಇಲಾಖೆಗಳು ನೌಕರರ ಹಾಗೂ ಸರ್ಕಾರದ ಹಂತದಲ್ಲಿ ಅಧಿಕಾರಿಗಳ ಜೇಷ್ಠತಾ ಪಟ್ಟಿಯನ್ನು ಪ್ರತಿ ವರ್ಷ ಪ್ರಕಟಿಸುತ್ತಿಲ್ಲ.ಆದ್ದರಿಂದ, ಎಲ್ಲಾ ಇಲಾಖೆಗಳಲ್ಲಿ ಪ್ರತಿವರ್ಷ ಜನವರಿ ಅಥವಾ ಡಿಸೆಂಬರ್ ಮಾಹೆಯಲ್ಲಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವೃಂದದ ಅಧಿಕಾರಿ-ನೌಕರರ ಜೇಷ್ಠತಾ ಪಟ್ಟಿಯನ್ನು ಕಾಲಮಿತಿಯೊಳಗೆ ಪ್ರಕಟಿಸುವಂತೆ ಇಲಾಖಾ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ನಿರ್ದೆಶನ ನೀಡಬೇಕು.
ಕೆನೆಪದರ ವಾರ್ಷಿಕ ಆದಾಯ ಮಿತಿಯನ್ನು ರೂ. 15 ಲಕ್ಷಗಳಿಗೆ ಹೆಚ್ಚಳ ಮಾಡುವುದು. ಪ್ರಸ್ತುತ ರಾಜ್ಯ ಸರ್ಕಾರಿ ನೌಕರರು ತಮ್ಮ ಮಕ್ಕಳ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಪಡೆಯಲು ಕೆನೆಪದರ ಮಿತಿಯನ್ನು ವಾರ್ಷಿಕವಾಗಿ ರೂ. 8 ಲಕ್ಷ ಗಳಿಗೆ ನಿಗಧಿಪಡಿಸಿದೆ.
ರಾಜ್ಯ ಸರ್ಕಾರವು ರಾಜ್ಯ 7ನೇ ವೇತನ ಆಯೋಗದ ಶಿಫಾರಸ್ಸುಗಳ ಅನುಷ್ಠಾನದಿಂದಾಗಿ ಸರ್ಕಾರಿ ನೌಕರರ ಮೂಲವೇತನದಲ್ಲಿ ಹೆಚ್ಚಳವಾಗಿರುವುದರಿಂದ ‘ಸಿ’ ಮತ್ತು ‘ಡಿ’ ವೃಂದದ ನೌಕರರ ಮಕ್ಕಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ.
ಸರ್ಕಾರಿ ನೌಕರರ ಪ್ರಸ್ತುತ ವಾರ್ಷಿಕ ಆದಾಯದ ಆಧಾರದ ಮೇಲೆ 2025ರ ಕೇಂದ್ರ ಆದಾಯ ತೆರಿಗೆ ಪದ್ಧತಿಯಲ್ಲಿ ರೂ. 12.75 ಲಕ್ಷದ ವರೆಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಿರುವುದರಿಂದ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಶಿಕ್ಷಣ ಮತ್ತು ಉದ್ಯೋಗ ದಲ್ಲಿ ಮೀಸಲಾತಿಯನ್ನು ಪಡೆಯಲು ಕೆನೆಪದರ ಮಿತಿಯನ್ನು ವಾರ್ಷಿಕವಾಗಿ ರೂ. 15 ಲಕ್ಷಗಳಿಗೆ ಹೆಚ್ಚಳ ಮಾಡಬೇಕು.
ರಾಜ್ಯ ಸರ್ಕಾರದ ಅಧಿಕಾರಿ/ ನೌಕರರ ಇಲಾಖಾ ವಿಚಾರಣೆಯನ್ನು ಕಾಲಮಿತಿಯೊಳಗೆ ಇತ್ಯರ್ಥ ಗೊಳಿಸುವುದು. ಅಧಿಕಾರಿ/ ನೌಕರರ ಮೇಲಿನ ಇಲಾಖಾ ವಿಚಾರಣೆಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸುವಂತೆ ಸರ್ಕಾರದ ಆದೇಶವಿದ್ದಾಗ್ಯೂ, ಹಲವು ಇಲಾಖೆಗಳಲ್ಲಿ ಇಲಾಖಾ ವಿಚಾರಣೆಯನ್ನು ಇತ್ಯರ್ಥಗೊಳಿಸಲು ವಿಚಾರಣಾ ಸಮಿತಿಯನ್ನೇ ರಚಿಸುವಲ್ಲಿ ಹಾಗೂ ವಿಚಾರಣಾ ವರದಿ ನೀಡುವಲ್ಲಿ ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದರಿಂದ ಬಾಧಿತ ನೌಕರರು ಅನಗತ್ಯವಾಗಿ ಮುಂಬಡ್ತಿ ಸೇರಿದಂತೆ ಸೇವಾ ಸವಲತ್ತುಗಳಿಂದ ವಂಚಿತರಾಗುವುದಲ್ಲದೇ, ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ.
ಆದ್ದರಿಂದ ಎಲ್ಲಾ ಇಲಾಖೆಗಳಲ್ಲೂ ಅಧಿಕಾರಿ/ ನೌಕರರ ಮೇಲಿನ ಇಲಾಖಾ ವಿಚಾರಣೆಯನ್ನು ನಿಗದಿತ ಕಾಲ ಮಿತಿಯೊಳಗೆ ಇತ್ಯರ್ಥಪಡಿಸಿ ಲಭ್ಯವಿರುವ ಸೇವೆ ಸಲವತ್ತುಗಳನ್ನು ಮಂಜೂರು ಮಾಡಲು ಸೂಕ್ತ ಆದೇಶವನ್ನು ಹೊರಡಿಸಬೇಕು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..