ಬೆಂಗಳೂರು –
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶ ಪ್ರತಿಯೊಂದರಲ್ಲೂ ವಿಭಿನ್ನತೆಯನ್ನು ಹೊಂದಿದೆ. ನಮ್ಮ ಸಂಸ್ಕ್ರತಿ ಸಂಪ್ರದಾಯ ಶ್ರೀಮಂತಿಯನ್ನು ಹೊಂದಿದ್ದು ನಾವು ಆಚರಣೆ ಮಾಡುವ ಪ್ರತಿಯೊಂದು ಹಬ್ಬ ಹರಿದಿನಗಳು ವಿಭಿನ್ನತೆಯೊಂದಿಗೆ ವಿಶೇಷತೆಯನ್ನು ಹೊಂದಿದ್ದು ಇದಕ್ಕೇ ತಳಸಿ ಮದುವೆ ಕೂಡಾ ಒಂದು
ತುಳಸಿ ಮದುವೆ
ತುಳಸಿ ಮದುವೆ ಹಿಂದೂಗಳ ಧಾರ್ಮಿಕ ಆಚರಣೆಗಳಲ್ಲಿ ಇದು ಕೂಡಾ ಒಂದು ,ಪ್ರತಿವರ್ಷ ತುಳಸಿ ವಿವಾಹವನ್ನು ಕಾರ್ತಿಕ್ ತಿಂಗಳ ಶುಕ್ಲ ಪಕ್ಷದ ಏಕಾದಶಿ ದಿನದಂದು ನೆರವೇರಿಸಲಾಗುತ್ತದೆ. ಈ ವರ್ಷ ಈ ಏಕಾದಶಿ ದಿನಾಂಕವು ನವೆಂಬರ್ 25 ರಂದು ಪ್ರಾರಂಭವಾಗಿ 26 ರಂದು ಕೊನೆಗೊಳ್ಳುತ್ತದೆ.ತುಳಸಿ ಮದುವೆಯಲ್ಲಿ ದೇವಿ ತುಳಸಿಯ ಮದುವೆ ಕೃಷ್ಣ / ಶಾಲಿಗ್ರಾಮ್ ದ ಜೊತೆಗೆ ಜೊತೆಗೆ ನೆರವೇರಿಸಲಾಗುತ್ತದೆ. ತುಳಸಿ ವಿವಾಹದ ಆಚರಣೆಯನ್ನು ಮಾಡುವ ವ್ಯಕ್ತಿಯು ಕನ್ಯಾದಾನಕ್ಕೆ ಸಮನಾದ ಪುಣ್ಯ ಪ್ರಾಪ್ತಿ ಮಾಡುತ್ತಾನೆ ಎಂಬುದು ನಮ್ಮ ಪುರಾಣಗಳಲ್ಲಿ ಹೇಳಲಾಗಿದೆ.

ತುಳಸಿ ಮದುವೆಯ ಇತಿಹಾಸ
ತುಳಸಿ ಮದುವೆಯನ್ನು ಭಾರತದ ಅನೇಕ ಭಾಗಗಳಲ್ಲಿ ಆಚರಿಸಲಾಗುತ್ತದೆ, ಶಾಲಿಗ್ರಾಮ್ ಅನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗುತ್ತದೆ. ಪೌರಾಣಿಕ ಕಥೆಯ ಪ್ರಕಾರ, ಒಮ್ಮೆ ತುಳಸಿ ಕೋಪದಿಂದ ವಿಷ್ಣುವನ್ನು ತನ್ನ ಶಾಪದಿಂದ ಕಲ್ಲನ್ನಾಗಿಸುತ್ತಾಳೆ. ತುಳಸಿಯ ಈ ಶಾಪದಿಂದ ಮುಕ್ತಿ ಪಡೆಯಲು, ವಿಷ್ಣು ಶಾಲಿಗ್ರಾಮ ರೂಪದಲ್ಲಿ ಅವತರಿಸಿ ತುಳಸಿಯನ್ನು ಮದುವೆಯಾಗುತ್ತಾನೆ. ತುಳಸಿ ದೇವಿಯನ್ನು ದೇವಿ ಲಕ್ಷ್ಮಿಯ ಅವತಾರವೆಂದು ಪರಿಗಣಿಸಲಾಗಿದೆ. ತುಳಸಿ ವಿವಾಹವನ್ನು ಕೆಲವು ಸ್ಥಳಗಳಲ್ಲಿ ದ್ವಾದಶಿಯಂದೂ ಕೂಡ ನೆರವೇರಿಸಲಾಗುತ್ತದೆ.ತುಳಸಿ ವಿವಾಹದ ದಿನಾಂಕ ಮುಹೂರ್ತ ಮತ್ತು ಧಾರ್ಮಿಕ ಮಹತ್ವ ವಿವಾಹದ ಪೂಜಾ ವಿಧಿ ವಿಧಾನ ಹೀಗೆ ಎಲ್ಲವೂ ವಿಭಿನ್ನ ವಿಶೇಷವಾಗಿವೆ.

ತುಳಸಿ ಮದುವೆ ಮಾಡುವ ವಿಧಾನ
ಮೊದಲು ತುಳಸಿ ಸಸ್ಯಕ್ಕೇ ಮಂಟದ ತಯಾರಿಸಿ. ಸಸ್ಯದ ಮೇಲೆ ಕೆಂಪುಬಣ್ಣದ ವಸ್ತ್ರ ಹೊದಿಸಿ. ಬಳಿಕ ತುಳಸಿ ಸಸ್ಯಕ್ಕೆ ಶೃಂಗಾರದ ವಸ್ತುಗಳನ್ನು ಅರ್ಪಿಸಿ. ಶ್ರೀಗಣೇಶ ಅಥವಾ ಶಾಲಿಗ್ರಾಮ್ ಗೆ ಪೂಜೆ ಸಲ್ಲಿಸಿ. ಶಾಲಿಗ್ರಾಮ್ ವಿರಾಜಮಾನನಾಗಿರುವ ಸಿಂಹಾಸನವನ್ನು ಕೈಯಲ್ಲಿ ಹಿಡಿದು ದೇವಿ ತುಳಸಿಯ 7 ಪ್ರದಕ್ಷಿಣೆ ಹಾಕಿ. ಅರ್ಚನೆಯ ಬಳಿಕ ವಿವಾಹದಲ್ಲಿ ಕೇಳಿ ಬರುವ ಮಂಗಳವಾದ್ಯ ಮೊಳಗಿಸಿ. ಇದರಿಂದ ವಿವಾಹ ಸಂಪನ್ನವಾದಂತಾಗುತ್ತದೆ.ಪ್ರತಿಯೊಂದು ಪೂಜೆ ಪುನಸ್ಕಾರಗಳಲ್ಲಿ ಶುದ್ಧತೆಯ ಸಂಕೇತವಾಗಿ ತುಳಸಿಯನ್ನು ಹೆಚ್ಚಾಗಿಯೇ ಬಳಸುತ್ತಾರೆ. ತುಳಸಿ ದೇವಿಯನ್ನು ಮುಟ್ಟಿದೊಡನೆಯೇ ನಾವು ಶುದ್ಧರಾಗುತ್ತೇವೆ ಹಾಗೂ ಪ್ರಾರ್ಥಿಸುವುದರಿಂದ ಎಲ್ಲಾ ಕಾಯಿಲೆಗಳು ಹೇಳಹೆಸರಿಲ್ಲದಂತೆ ಮಾಯವಾಗಿ ನೆಮ್ಮದಿ ಸಿಗುತ್ತದೆ ಹಾಗೆಯೇ ಒಮ್ಮೆ ತುಳಸಿಯನ್ನು ನೀರಿನಿಂದ ತೋಯಿಸಿದರೆ ಯಮರಾಜನ ಭಯವು ಮರೆಯಾಗುತ್ತದೆ ಎಂದು ಸ್ಕಂದ ಪುರಾಣವು ಹೇಳುತ್ತದೆ. ವಾಸ್ತು ಕೂಡ ತುಳಸಿಗೆ ಪೂಜನೀಯ ಸ್ಥಾನವನ್ನು ನೀಡಿದೆ.ಕಾರ್ತಿಕ ಮಾಸದಲ್ಲಿ ಆಚರಿಸುವಂತಹ ವಿಶೇಷ ಆಚರಣೆಗಳಲ್ಲಿ ತುಳಸಿ ಪೂಜೆಯೂ ಒಂದು. ಕಾರ್ತಿಕ ದ್ವಾದಶಿಯಂದು ತುಳಸಿಯನ್ನು ಆರಾಧನೆ ಮಾಡಲಾಗುತ್ತದೆ. ಈ ದಿನವನ್ನು ವಿಷ್ಣುಮನೆಯ ಮುಂದೆ ಒಂದು ಪುಟ್ಟ ತುಳಸಿ ಕಟ್ಟೆ, ಪ್ರತಿದಿನ ಮುಂಜಾನೆ ತುಳಸಿಯ ಮುಂದೆ ರಂಗೋಲಿ ಇಡುವುದು, ತುಳಸಿ ದೇವಿಗೆ ಮೊದಲು ನೀರೆರೆದು ದಿನವನ್ನು ಪ್ರಾರಂಭಿಸುವುದು ಎಂದರೆ ಮಹಿಳೆಯರಿಗೆ ಏನೋ ಒಂದು ಬಗೆಯ ಸಂಭ್ರಮ ಸಡಗರ. ಈ ವಿಧಿ-ವಿಧಾನಗಳು ಮನೆಗೆ ಧನಾತ್ಮಕ ಶಕ್ತಿಯನ್ನು ಪ್ರೇರೇಪಿಸುವುದು. ಜೊತೆಗೆ ಮನೆಯಲ್ಲಿ ಸಮೃದ್ಧಿ ನೆಲೆಸುವುದು. ಯಾರು ಮನೆಯಲ್ಲಿ ಮುಂಜಾನೆ ಬಾಗಿಲಿಗೆ ರಂಗೋಲಿ ಹಾಗೂ ತುಳಸಿಗೆ ನೀರೆರೆಯುತ್ತಾರೋ ಆ ಮನೆಯಲ್ಲಿ ಸದಾ ಸುಖ-ಶಾಂತಿ ನೆಲೆಸಿರುತ್ತದೆ ಎನ್ನುವ ನಂಬಿಕೆಯಿದೆ.ನಿತ್ಯವೂ ಮನೆಯ ಹೊರಗಿನಿಂದಲೇ ಧನಾತ್ಮಕ ಶಕ್ತಿಯನ್ನು ಆಕರ್ಷಿಸಿ, ಮನೆ ಮಂದಿಗೆ ನೆಮ್ಮದಿಯನ್ನು ನೀಡುವ ತಾಯಿ ತುಳಸಿ ದೇವಿ. ಶಕ್ತಿಯನ್ನು ಮತ್ತು ಪವಿತ್ರತೆಯನ್ನು ಸಂಕೇತಿಸುವ ತುಳಸಿ ದೇವಿ ಮನೆಗೆ ಸಮೃದ್ಧಿಯನ್ನು ತರುವ ತಾಯಿ. ಈ ತಾಯಿ ಭಗವಾನ್ ವಿಷ್ಣುವನ್ನು ವಿವಾಹವಾದ ದಿನವನ್ನು ತುಳಸಿ ಅಯನ ಎಂದು ಆಚರಿಸಲಾಗುವುದು.

ಆ ಸುದಿನದ ಸಂಕೇತವಾಗಿ ಭಕ್ತರು ಪ್ರತಿವರ್ಷ ಅತ್ಯಂತ ಶ್ರದ್ಧಾ ಭಕ್ತಿಯಿಂದ ತುಳಸಿ ವಿವಾಹದ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬಕ್ಕೆ ತುಳಸಿ ಅಯನ, ತುಳಸಿ ಹಬ್ಬ ಅಥವಾ ತುಳಸಿ ವಿವಾಹ, ತುಳಸಿ ಮದುವೆ ಹೀಗೆ ಹಲವಾರು ಹೆಸರುಗಳಿಂದ ಕರೆಯುವರು.ಕಾರ್ತಿಕ ಮಾಸದ ಪ್ರಭೋಧಿನಿ ಏಕಾದಶಿಯಂದು ಈ ಆಚರಣೆಯನ್ನು ಮಾಡಲಾಗುವುದು. ಲಕ್ಷ್ಮಿ ದೇವಿಯ ಪ್ರತಿರೂಪಳಾದ ತುಳಸಿ ದೇವಿಗೆ ಅಂದು ವಿಶೇಷ ಅಲಂಕಾರ, ನೈವೇದ್ಯಗಳನ್ನು ಅರ್ಪಿಸುವುದರ ಮೂಲಕ ಸಡಗರದ ವಿವಾಹ ಹಬ್ಬವನ್ನು ಆಚರಿಸುತ್ತಾರೆ.ಹಿಂದೂ ಪಂಚಾಂಗದ ಪ್ರಕಾರ ತುಳಸಿ ವಿವಾಹವನ್ನು ನವೆಂಬರ್ ತಿಂಗಳಲ್ಲಿ ಆಚರಿಸಲಾಗುವುದು. ವಿವಾಹಿತ ಮಹಿಳೆಯರು ಕುಟುಂಬದ ರಕ್ಷಣೆ, ಪತಿಯ ಆರೋಗ್ಯ ಮತ್ತು ಆಯುಷ್ಯದ ವೃದ್ಧಿಗೆ ತುಳಸಿ ಪೂಜೆಯನ್ನು ಕೈಗೊಳ್ಳುತ್ತಾರೆ. ಅದೇ ಅವಿವಾಹಿತ ಮಹಿಳೆಯರು ಉತ್ತಮ ಜೀವನ ಸಂಗಾತಿಯನ್ನು ಪಡೆದುಕೊಳ್ಳಲು ಆರಾಧಿಸುತ್ತಾರೆ. ಒಟ್ಟಿನಲ್ಲಿ ಮಹಿಳೆಯರಿಗೆ ಹಾಗೂ ಕುಟುಂಬದವರಿಗೆ ತುಳಸಿ ವಿವಾಹವು ಅತ್ಯಂತ ಸಂತೋಷ ಹಾಗೂ ಸಡಗರವನ್ನು ನೀಡುವ ಹಬ್ಬವಾಗಿರುತ್ತದೆ. ತುಳಸಿ ವಿವಾಹದ ನಂತರವೇ ಮನೆಯಲ್ಲಿ ವಿಶೇಷ ಶುಭ ಕಾರ್ಯಗಳನ್ನು ಹಮ್ಮಿಕೊಳ್ಳವ ಪದ್ಧತಿಯಿದೆ.

ತುಳಸಿಯ ಮಹತ್ವ
ತುಳಸಿ ಎನ್ನುವುದು ಒಂದು ಪುಟ್ಟ ಔಷಧೀಯ ಗುಣವನ್ನು ಹೊಂದಿರುವ ಸಸ್ಯ. ಇದಕ್ಕೆ ಧಾರ್ಮಿಕವಾಗಿಯೂ ಅತ್ಯಂತ ಪವಿತ್ರ ಸ್ಥಾನವನ್ನು ನೀಡಲಾಗಿದೆ. ವಿಷ್ಣುವಿನ ಪತ್ನಿಯಾದ ತುಳಸಿ ಅತ್ಯಂತ ಶ್ರೇಷ್ಠ ಹಾಗೂ ಶಕ್ತಿಯನ್ನು ಹೊಂದಿರುವ ದೇವಿ ಎಂದು ಹೇಳಲಾಗುವುದು. ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯಿಂದ ಕೂಡಿರುವ ತುಳಸಿ ದಳವನ್ನು ಬಳಸದೆ ದೇವತಾ ಪೂಜಾ ಕಾರ್ಯಗಳು ಸಂಪನ್ನವಾಗುವುದಿಲ್ಲ. ವಿಷ್ಣು ದೇವರ ಪತ್ನಿಯಾದ ತುಳಸಿಯು ಲಕ್ಷ್ಮಿ ದೇವಿಯ ಸಂಕೇತ ಎನ್ನುವ ನಂಬಿಕೆಯಿದೆ. ತುಳಸಿ ನೀರಿನ್ನು ಸಿಂಪಡಿಸುವುದರ ಮೂಲಕ ಮನೆಯನ್ನು, ವಸ್ತುಗಳನ್ನು ಹಾಗೂ ವ್ಯಕ್ತಿಯನ್ನು ಶುದ್ಧಗೊಳಿಸಲಾಗುವುದು.ಒಂದು ಹನಿ ತುಳಸಿಯ ನೀರು ಅತ್ಯಂತ ಪವಿತ್ರ ಶಕ್ತಿಯನ್ನು ಒಳಗೊಂಡಿರುತ್ತದೆ. ವಿವಿಧ ಅನಾರೋಗ್ಯಗಳನ್ನು ಬಹುಬೇಗ ನಿವಾರಿಸುವ ಶಕ್ತಿಯನ್ನು ತುಳಸಿ ಎಲೆಗಳು ಒಳಗೊಂಡಿವೆ.ತುಳಸಿ ಗಿಡಕ್ಕೆ ಮತ್ತು ವಿಷ್ಣು ದೇವರ ವಿಗ್ರಹಕ್ಕೆ ನೀರನ್ನು ಅರ್ಪಿಸಿ ಸ್ನಾನ ಮಾಡಿಸುವುದು, ಹೂವಿನ ಅಲಂಕಾರ, ವಿಶೇಷ ನೈವೇದ್ಯ ಮತ್ತು ಹಣ್ಣು-ಹಂಪಲುಗಳನ್ನು ಇಟ್ಟು ಪೂಜೆ ಮಾಡಲಾಗುವುದು.

ತುಳಸಿ ಗಿಡಕ್ಕೆ ವಧುವಿನ ರೂಪದಂತೆ ಕೆಂಪು ಸೀರೆ, ಆಭರಣ, ಕೆಂಪು ಕುಂಕುಮದೊಂದಿಗೆ ಅಲಂಕರಿಸಲಾಗುತ್ತದೆ. ವಿಷ್ಣು ವಿಗ್ರಹಕ್ಕೆ ಬಿಳಿಯ ಧೋತಿ, ಅಥವಾ ಮಡಿ ಬಟ್ಟೆಯಿಂದ ಅಲಂಕರಿಸುವರು. ನಂತರ ಧಾರಗಳಿಂದ ವಿಗ್ರಹ ಹಾಗೂ ಸಸ್ಯದ ಸುತ್ತಲೂ ಸುತ್ತುವರು. ಬಳಿಕ ವಿಶೇಷ ಮಂತ್ರ, ಪ್ರಾರ್ಥನೆ ಮತ್ತು ಹಾಡು ಹೇಳುವುದರ ಮೂಲಕ ಪೂಜೆಯನ್ನು ಮಾಡಲಾಗುವುದು.ಮನೆಯ ಸದಸ್ಯರೆಲ್ಲರೂ ತುಳಸಿ ಮತ್ತು ವಿಷ್ಣುವಿಗೆ ಅಕ್ಷತೆ, ಕುಂಕುಮ ಮತ್ತು ಹೂವನ್ನು ಅರ್ಪಿಸಿ ನಮಸ್ಕರಿಸಬೇಕು. ಆಗ ಪೂಜೆಯು ಸಂಪೂರ್ಣವಾಗುವುದು. ನಂತರ ಪ್ರಸಾದವನ್ನು ಹಂಚಲಾಗುವುದು.

ವಾಸ್ತು ಶಾಸ್ತ್ರದಲ್ಲಿ ತುಳಸಿಯ ಮಹತ್ವ
ವಾಸ್ತು ಶಾಸ್ತ್ರದಲ್ಲೂ ಸಹ ತುಳಸಿಗೆ ವಿಶೇಷ ಸ್ಥಾನವನ್ನು ನೀಡಲಾಗುತ್ತದೆ. ತುಳಸಿ ಗಿಡವನ್ನು ಮನೆಯ ಮುಂದೆ, ದೇವ ಮೂಲೆಯಲ್ಲಿ ಇಡಬೇಕು. ಅಗ್ನಿ ಮೂಲೆಯ ಭಾಗದಲ್ಲಿ ತುಳಸಿ ಸಸ್ಯವನ್ನು ನೆಡುವುದು ಅಥವಾ ಕೂರಿಸುವ ಕಾರ್ಯ ಮಾಡಬಾರದು. ಮನೆಯ ಆವರಣದಲ್ಲಿ ತುಳಸಿ ಗಿಡವನ್ನು ಸೂಕ್ತ ಸ್ಥಳದಲ್ಲಿ ಇಡಬೇಕು. ಆಗ ಮಾತ್ರ ಮನೆಯಲ್ಲಿ ನೆಮ್ಮದಿ, ಸಂತೋಷ ನೆಲೆಸುವುದು. ಜೊತೆಗೆ ಮನೆಯ ಯಜಮಾನ ಕೈಗೊಂಡ ಕೆಲಸ ಕಾರ್ಯಗಳು ಅತ್ಯಂತ ಲಾಭದಾಯಕದಿಂದ ಕೂಡಿರುತ್ತವೆ. ಮನೆಯ ದೋಷಗಳನ್ನು ನಿವಾರಿಸಲು ತುಳಸಿ ಗಿಡವನ್ನು ದೇವ ಮೂಲೆಯಲ್ಲಿ ಇಡಬೇಕು. ಹಲವೆಡೆ ಮನಸ್ಸಿಗೆ ಬಂದಂತೆ ನೆಡಬಾರದು. ತುಳಸಿಯ ಗಾಳಿಯು ಮನೆಗೆ ಶುದ್ಧ ಹಾಗೂ ಸಕಾರಾತ್ಮಕ ಶಕ್ತಿ ಆಗಮಿಸುವಂತೆ ಪ್ರೇರೇಪಣೆ ನೀಡುತ್ತದೆ.ಇದಿಷ್ಟು ತುಳಸಿ ಮದುವೆಯ ಕುರಿತಾದ ಇತಿಹಾಸ.