ತುರುವೇಕೆರೆ –
ಪ್ರಯಾಣಿಕನಿಂದ 5 ರೂ. ನೋಟನ್ನು ಪಡೆಯಲು ನಿರಾಕರಿಸಿದ ಕಂಡಕ್ಟರ್ ಒಬ್ಬರಿಗೆ 1000 ರೂ. ದಂಡ ತೆತ್ತ ಪ್ರಕರಣ ಬೆಳಕಿಗೆ ಬಂದಿದೆ. ಅರಸೀಕೆರೆ ಡಿಪೋಗೆ ಸೇರಿದ ಸಾರಿಗೆ ಬಸ್‍ನಲ್ಲಿ ಅರಸೀಕೆರೆ ಯಿಂದ ತಿಪಟೂರಿನತ್ತ ಪ್ರಯಾಣ ಬೆಳೆಸಿದ್ದ ಸೋಮಶೇಖರ್ ಅವರು 35 ರೂ.ಗಳ ಟಿಕೇಟ್ ಪಡೆದುಕೊಳ್ಳುವ ಸಲುವಾಗಿ 10 ರೂ.ಗಳ 3 ಮತ್ತು 5 ರೂಪಾಯಿಯ ಒಂದು ನೋಟನ್ನು ನಿರ್ವಾಹಕ ಮಹೇಶ ಗೆ ಕೊಟ್ಟಿದ್ದಾರೆ. 10 ರೂ.ಗಳನ್ನು ಪಡೆದ ನಿರ್ವಾಹಕ 5 ರೂ. ನೋಟನ್ನು ಪಡೆಯಲು ನಿರಾಕರಿಸಿದ್ದಾನೆ.
ಸೋಮಶೇಖರ್ ತಮ್ಮ ಬಳಿ 5 ರೂ. ನೋಟು ಬಿಟ್ಟರೆ ಬೇರೆ ಹಣವಿಲ್ಲವೆಂದು ಹೇಳಿದರೂ ಸಹ ದಾರಿ ಮಧ್ಯೆಯೇ ಸೋಮಶೇಖರ್‍ನನ್ನು ಕಂಡಕ್ಟರ್ ಇಳಿಸಲು ಮುಂದಾಗಿದ್ದಾರೆ.ಮಾತಿಗೆ ಮಾತು ಬೆಳೆದಿದ್ದರಿಂದ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಸೋಮಶೇಖರ್ ದೂರು ನೀಡಿದ್ದಾರೆ. ವಿಷಯ ಅರಿತ ಪೊಲೀಸರು ಪ್ರಯಾಣಿಕನಿಂದ 5 ರೂ. ನೋಟನ್ನು ಪಡೆದುಕೊಳ್ಳುವಂತೆ ಬುದ್ದಿ ಹೇಳಿದ್ದಾರೆ.
ಅವಮಾನ ಮಾಡಿದ ನಿರ್ವಾಹಕನ ವರ್ತನೆಯಿಂದ ಬೇಸತ್ತ ಸೋಮಶೇಖರ್ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ. ಕೇಂದ್ರ ಕಚೇರಿ ಮಹೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಿಕ್ಕಮಗಳೂರು ವಿಭಾಗೀಯ ನಿಯಂತ್ರಕರಿಗೆ ಸೂಚನೆ ನೀಡಿತ್ತು. ಸೂಚನೆ ಮೇರೆಗೆ ವಿಭಾಗೀಯ ನಿಯಂತ್ರಕರು ನಿರ್ವಾಹಕನ ವೇತನದಿಂದ 1000 ರೂ. ಕಡಿತಗೊಳಿಸಿದ್ದಾರೆ. ಅಲ್ಲದೇ ಪ್ರಯಾಣಿಕರ ರೊಂದಿಗೆ ಸೌಜನ್ಯದೊಂದಿಗೆ ವರ್ತಿಸುವಂತೆ ಸೂಚನೆ ನೀಡಿದ್ದಾರೆ ಇನ್ನೂ ಹೋರಾಟ ಮಾಡಿದ ವ್ಯಕ್ತಿಯೊಬ್ಬರಿಗೆ ಜಯ ಸಿಕ್ಕಿದೆ.