ಬೆಂಗಳೂರು –
ಬೆಂಗಳೂರಿನ ನಾಲ್ಕು ಕಡೆಗಳಲ್ಲಿ ಪೊಲೀಸರು ಕಾರ್ಯಾಚರಣೆ ಮಾಡಿ ನಕಲಿ ನೋಟುಗಳ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಖಚಿತ ಮಾಹಿತಿ ಪಡೆದ ಬೆಂಗಳೂರಿನ ಸಿಸಿಬಿ ಪೊಲೀಸರು ಸುಮಾರು 2 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.ಖಚಿತ ಮಾಹಿತಿ ಮೇರೆಗೆ ವಿವಾದಾತ್ಮಕ ಪ್ರದೇಶವಾದ ಪಾದರಾಯನಪುರ ಮತ್ತು ವಿಲ್ಸನ್ ಗಾರ್ಡನ್ ಸೇರಿದಂತೆ ನಾನಾ ಕಡೆ ದಾಳಿ ಮಾಡಿ 2000 ಮತ್ತು 200 ರೂ. ಮುಖಬೆಲೆಯ ನೋಟುಗಳು ಹಾಗೂ ನೋಟು ಪ್ರಿಂಟ್ ತಯಾರಿಕಾ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ನಕಲಿ ನೋಟಿನ ಹಾವಳಿ ಪ್ರಾರಂಭವಾಗಿದ್ದು, ಈ ಸಂಬಂಧ ಪಾದರಾಯನಪುರದ ಇಮ್ರಾನ್ ಹಾಗೂ ಮುಬಾರ್ ಅವರನ್ನು ಬಂಧಿಸಲಾಗಿದೆ. ನಗರದ ನಾಲ್ಕು ಕಡೆ ಇವರು ನಕಲಿ ನೋಟು ತಯಾರಿಸುತ್ತಿದ್ದರೆಂದು ಹೇಳಲಾಗಿದ್ದು ಪಾದರಾಯನಪುರದ ಅರಾಫತ್ ನಗರದಲ್ಲಿನ ನೋಟು ತಯಾರಿಕೆ ಘಟಕದ ಮೇಲೆ ವಿಲ್ಸನ್ ಗಾರ್ಡನ್ ಪೋಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು ನಗರದಲ್ಲಿ ನಕಲಿ ನೋಟು ಹಾವಳಿ ಪ್ರಕರಣದಲ್ಲಿ ನಿನ್ನೆ ಜಮಾಲ್ ಎಂಬಾತನನ್ನು ಬಂಧಿಸಲಾಗಿತ್ತು. ಇದೀಗ ಇನ್ನಿಬ್ಬರನ್ನು ಬಂಧಿಸಿದ ಪೋಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ತೆರೆ ಮರೆಯಲ್ಲಿ ನಡೆಯುತ್ತಿದ್ದ ಖೋಟಾ ನೋಟಿನ ಜಾಲವನ್ನು ಸಿಸಿಬಿ ಪೊಲೀಸರು ಭೇಧಿಸಿದ್ದು ಇನ್ನೂ ಹೆಚ್ಚಿನ ಮೂಲವನ್ನು ಹುಡುಕಾಡುತ್ತಿದ್ದಾರೆ.