ನೈಜೀರಿಯಾ –
ಇಲ್ಲಿಯ ವಸತಿ ಶಾಲೆಯೊಂದಕ್ಕೆ ನುಗ್ಗಿದ ಬಂದೂಕುಧಾರಿಗಳು ಶಾಲೆಯಲ್ಲಿದ್ದ 317 ಮಕ್ಕಳನ್ನು ಅಪಹರಿಸಿಕೊಂಡು ಹೋಗಿರುವ ಆತಂಕದ ಘಟನೆ ಉತ್ತರ ನೈಜೀರಿಯಾದ ಜಂಗೆಬ್ಬೆ ನಗರದಲ್ಲಿ ನಡೆದಿದೆ.ನಗರದ ಬಾಲಕಿಯರ ಸರ್ಕಾರಿ ಕಿರಿಯ ಮಾಧ್ಯಮಿಕ ಶಾಲೆಗೆ ಬಂದೂಕು ಜತೆ ನುಗ್ಗಿದ ಉಗ್ರರು ಈ ಕೃತ್ಯ ಎಸಗಿದ್ದಾರೆ. ಸುದ್ದಿ ತಿಳಿದ ತಕ್ಷಣ ಪೊಲೀಸರು ಮತ್ತು ಮಿಲಿಟರಿ ಜಂಟಿ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿನಿಯರನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಅವರಿಂದ ಅದು ಸಾಧ್ಯವಾಗಲಿಲ್ಲ.
ಬಂದೂಕುಧಾರಿ ಉಗ್ರರು ಶಾಲೆಯಲ್ಲಿ ಹಲವಾರು ಗಂಟೆ ಇದ್ದರು. ಆದರೆ ಅವರು ಅಪಾರ ಸಂಖ್ಯೆಯಲ್ಲಿ ಹಾಗೂ ಶಸ್ತ್ರಾಸ್ತ್ರಗಳೊಂದಿಗೆ ಇದ್ದ ಕಾರಣದಿಂದ ಶಾಲೆಯ ಸಮೀಪವೇ ದೊಡ್ಡ ಪ್ರಮಾಣದ ಸೇನಾ ಪಡೆಯಿದ್ದರೂ ಬಾಲಕಿಯರನ್ನು ರಕ್ಷಿಸುವಲ್ಲಿ ವಿಫಲವಾಗಿವೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನೈಜೀರಿಯಾ ಅಧ್ಯಕ್ಷ ಮುಹಮ್ಮದ್ ಬುಹಾರಿ, 10 ರಿಂದ 13 ವರ್ಷದ ಮಕ್ಕಳು ಓದುತ್ತಿದ್ದರು. ಎಲ್ಲಾ ಮಕ್ಕಳನ್ನು ಸುರಕ್ಷಿತ ವಾಗಿ ಅವರ ಪೋಷಕರ ಬಳಿ ತಲುಪಿಸು ವುದೇ ನಮ್ಮ ಮೂಲ ಉದ್ದೇಶವಾಗಿದೆ. ಹಣಕ್ಕಾಗಿ ಮುಗ್ಧ ಮಕ್ಕಳನ್ನು ಅಪಹರಿಸಿ, ಬೆದರಿಕೆಯೊಡ್ಡುವ ಬಂಡು ಕೋರರಿಗೆ ನಾವು ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.
ಹಣಕ್ಕಾಗಿ ಇಲ್ಲವೇ ಜೈಲಿನಲ್ಲಿರುವ ತಮ್ಮ ಗುಂಪಿನ ಸದಸ್ಯರನ್ನು ಬಿಡುಗಡೆ ಮಾಡಲು ಈ ರೀತಿ ಮಾಡಿರುವ ಸಾಧ್ಯತೆಗಳು ಇವೆ. ಆದರೆ ಇದಕ್ಕೆಲ್ಲಾ ನಾವು ಜಗ್ಗುವುದಿಲ್ಲ. ಮಕ್ಕಳನ್ನು ಸುರಕ್ಷಿತವಾಗಿ ಪಾಲಕರ ಬಳಿ ಬಿಡಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಘಟನೆಗೆ ವಿಶ್ವಸಂಸ್ಥೆ ಖಂಡನೆ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಿಸ್ ಮಾತನಾಡಿ, ಬಾಲಕಿಯರನ್ನು ತಕ್ಷಣ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡಿಸಬೇಕು ಹಾಗೂ ಅವರ ಕುಟುಂಬಗಳಿಗೆ ಸುರಕ್ಷಿತವಾಗಿ ಮರಳಿಸಬೇಕು ಎಂದಿದ್ದಾರೆ. ಶಾಲೆಗಳ ಮೇಲಿನ ದಾಳಿಯು ಮಾನವ ಹಕ್ಕುಗಳು ಮತ್ತು ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ವಿಶ್ವ ಸಂಸ್ಥೆ ವಕ್ತಾರ ಸ್ಟಿಫನ್ ದುಜಾರ್ರಿಕ್ ಹೇಳಿದ್ದಾರೆ.