ಹುಬ್ಬಳ್ಳಿ –
ಬಸ್ ವ್ಯವಸ್ಥೆ ಇಲ್ಲ ನೋಡ್ರಿ ನಮ್ಮ ಊರಿಗೆ ಚಕ್ಕಡಿ ಕಟ್ಟಿಕೊಂಡು ಹೊಂಟಿವಿ SSLC ಪರೀಕ್ಷೆಗೆ ವಿದ್ಯಾರ್ಥಿಗಳ ಗೋಳು…..ಸರ್ಕಾರ,ಶಿಕ್ಷಣ ಇಲಾಖೆಯ ಅಧಿಕಾರಿಗಳು ನೋಡಲೇಬೇಕಾದ ಸ್ಟೋರಿ…!

ಸರ್ಕಾರ ಇಂದಿನ ಮಕ್ಕಳೇ ಮುಂದಿನ ಭವ್ಯ ಭಾರತದ ಪ್ರಜೆಗಳು ಅಂತ ಬಾಯಿ ಮಾತಲ್ಲಿ ಭಾಷಣ ಏನೋ ಮಾಡುತ್ತಿದೆ.ಆದರೆ ಮಕ್ಕಳ ಕಷ್ಟಗಳು ಮಾತ್ರ ಸರ್ಕಾರಕ್ಕೆ ಆಗಲಿ ಜನಪ್ರತಿನಿಧಿ ಗಳಿಗೆ ಆಗಲಿ ಕಾಣುತ್ತಲೇ ಇಲ್ಲ.

ಹೌದು… ಕೋವಿಡ್ ಸಂಕಷ್ಟದ ನಡುವೆಯಲ್ಲಿಯೇ ಸರ್ಕಾರದ ನಿರ್ದೇಶನ ನೀಡಿ ಎಸ್.ಎಸ್.ಎಲ್.ಸಿ ಪರೀಕ್ಷೆ ಏನೋ ನಡೆಸಲು ನಿರ್ಧಾರ ಕೈಗೊಂಡಿದೆ. ಆದರೆ ಪರೀಕ್ಷೆಗೆ ಹೋಗಲು ಮಕ್ಕಳು ಹರಸಾಹಸ ಪಡುವ ಬಗ್ಗೆ ಯಾರೊಬ್ಬರೂ ಕೂಡ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ.
ಕುಂದಗೋಳ ತಾಲೂಕಿನಲ್ಲಿ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇಲ್ಲದ್ದಕ್ಕೆ ಚಕ್ಕಡಿ ಕಟ್ಟಿಕೊಂಡು ಪರೀಕ್ಷೆಗೆ ಹೋಗಿರುವುದು ನಿಜಕ್ಕೂ ಸಾರ್ವಜನಿಕರ ಕಣ್ಣನ್ನು ಕೆಂಪಗಾಗುವಂತೆ ಮಾಡಿದೆ.

ಕುಂದಗೋಳ ತಾಲೂಕಿನ ಯರಗುಪ್ಪಿಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ರೊಟ್ಟಿಗವಾಡ ಪರೀಕ್ಷಾ ಕೇಂದ್ರಕ್ಕೆ ಚಕ್ಕಡಿ ಕಟ್ಟಿಕೊಂಡು ಹೋಗಬೇಕಾಗಿದೆ. ಕುಂದಗೋಳ ವಿಧಾನಸಭಾ ಕ್ಷೇತ್ರದ ಶಾಸಕಿ ಕುಸುಮಾವತಿ ಶಿವಳ್ಳಿಯವರು ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಇಲ್ಲದಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ.

ಮಳೆಗಾಲದಲ್ಲಿಯೇ ಪರೀಕ್ಷೆ ಮಾಡಲು ಸರ್ಕಾರ ಏನೋ ನಿರ್ಧಾರ ಕೈಗೊಂಡಿದೆ. ಆದರೆ ಸರಿಯಾದ ಸಾರಿಗೆ ವ್ಯವಸ್ಥೆ ಮಾಡದೇ ಬೇಕಾ ಬಿಟ್ಟಿಯಾಗಿ ಮಕ್ಕಳ ಭವಿಷ್ಯದ ಬಗ್ಗೆ ನಿಷ್ಕಾಳಜಿ ತೋರುತ್ತಿರುವ ಸರ್ಕಾರದ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಮುಂದಿನ ಪರೀಕ್ಷೆಗೆ ಬಸ್ ಸೌಲಭ್ಯ ಕಲ್ಪಿಸಬೇಕಿದೆ.
ವರದಿ ಮಂಜುನಾಥ ಬಡಿಗೇರ (ಸೌಂದರ್ಯ) ಜೊತೆಯಲ್ಲಿ ಗೋಪ್ಯಾ ಸುದ್ದಿ ಸಂತೆ ನ್ಯೂಸ್ ಧಾರವಾಡ