ಹುಬ್ಬಳ್ಳಿ –
ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಬಾದಾಮಿಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿರುವ ವಿಧಾನ ಸಭೆ ವಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಬಾದಾಮಿಯಿಂದಲೇ ಸ್ಪರ್ಧಿಸುವುದಾಗಿ ಒಂದು ಕಡೆ ಹೇಳಿದ್ದಾರೆ.ಆದರೆ ಸಿದ್ದರಾಮಯ್ಯನವರಿಗೆ ಈ ಕ್ಷೇತ್ರ ಬಿಟ್ಟು ಕೊಟ್ಟಿದ್ದ ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಸಿದ್ಧರಾಮಯ್ಯ ಮತ್ತೆ ಸ್ಪರ್ಧಿಸಲು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ವಿಭಾಗೀಯ ಮಟ್ಟದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಬಿ.ಬಿ. ಚಿಮ್ಮನಕಟ್ಟಿ ವಿಷಯ ಪ್ರಸ್ತಾಪಿಸಿ 2018 ರ ವಿಧಾನ ಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದರಿಂದ ಅವರಿಗೆ ಬಾದಾಮಿ ಕ್ಷೇತ್ರ ಬಿಟ್ಟು ಕೊಡಲಾಗಿತ್ತು.ಐದು ಬಾರಿ ಶಾಸಕನಾಗಿ, ಮಾಜಿ ಸಚಿವನಾಗಿ ನಾನು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿ ಮುಂದಿನ ಚುನಾವಣೆಯಲ್ಲಿ ತಮಗೆ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇದರಿಂದಾಗಿ ರಾಜಕೀಯ ಮರುಜನ್ಮ ನೀಡಿದ ಬಾದಾಮಿ ಕ್ಷೇತ್ರದ ಬದಲಿಗೆ ಸಿದ್ದರಾಮಯ್ಯ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಚರ್ಚೆ ಶುರು ವಾಗಿದೆ. ಕಾಂಗ್ರೆಸ್ ಸಮಾವೇಶದಲ್ಲಿ ಚಿಮ್ಮನಕಟ್ಟಿ ಈ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಪಕ್ಷದೊಳಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರನ್ನು ಸಮಾ ಧಾನ ಮಾಡಲಾಗಿದೆ ಎಂದು ಹೇಳಲಾಗಿದೆ.
ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ, ಚಾಮರಾಜಪೇಟೆ, ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬೆಂಬಲಿಗರಿಂದ ಒತ್ತಡ ಬಂದಿದೆ. ಆದರೆ, ಅವರು ಬಾದಾಮಿಯಿಂದ ಸ್ಪರ್ಧಿಸುವ ಬಗ್ಗೆ ಹೇಳಿದ್ದು ಈಗಲೇ ಅಲ್ಲಿ ಸ್ಪರ್ಧೆಗೆ ಅವಕಾಶ ನೀಡಿದವರಿಂದಲೇ ವಿರೋಧ ಕೇಳಿ ಬರುತ್ತಿದ್ದು ಇದರಿಂದಾಗಿ ಸಿದ್ದರಾಮಯ್ಯನವರು ಮುಂದೇನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.