ಶಿವಮೊಗ್ಗ –
ಶಿಕ್ಷಕರೊಬ್ಬರ ವಾರ್ಷಿಕ ವೇತನ ಬಡ್ತಿ ಮತ್ತು ಇತರೆ ಸರ್ಕಾರಿ ಭತ್ಯೆಗಳನ್ನು ಮಂಜೂರು ಮಾಡಲು ಲಂಚ ಬೇಡಿಕೆ ಹಾಕುತ್ತಿದ್ದ ವೇಳೆ ಭದ್ರಾವತಿ ಕ್ಷೇತ್ರದ ಶಿಕ್ಷಣಾಧಿಕಾರಿ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಬಿಇಒ ಮತ್ತು ಮಧ್ಯವರ್ತಿ ಇಬ್ಬರೂ ತನಿಖೆ ವೇಳೆ ಹಿಡಿಹಿಡಿಯಲ್ಪಟ್ಟಿದ್ದಾರೆ ಶಿಕ್ಷಕರಾದ ಲಿಂಗರಾಜು ಅವರು 2011ರಿಂದ 2023ರವರೆಗೆ ತಮ್ಮ ಇಲಾಖೆಯಿಂದ ಬರಬೇಕಾದ ವಾರ್ಷಿಕ ವೇತನ ಬಡ್ತಿ ಹಾಗೂ ಇತರೆ ಭತ್ಯೆಗಳನ್ನು ಮಂಜೂರು ಮಾಡುವಂತೆ ಹಲವಾರು ಬಾರಿ ಬಿಇಒ ಮತ್ತು ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅಲ್ಲದೇ, ಕಛೇರಿಗೆ ಅಲೆದು ಸುಸ್ತಾಗಿ ಹೋಗುತ್ತಿದ್ದರೂ ಸಹ, ಕೆಲಸ ಆಗುತ್ತಿರಲಿಲ್ಲ. ಇತ್ತೀಚೆಗೆ ಬಿಇಒ ಎ.ಕೆ. ನಾಗೇಂದ್ರಪ್ಪ ಮತ್ತು ಮಧ್ಯವರ್ತಿ ಮಂಜುನಾಥ್ ಇಬ್ಬರೂ ಸೇರಿಕೊಂಡು, ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ಮಾಡಲು 4 ಲಕ್ಷ ರೂ. ಲಂಚಕ್ಕೆ ಬೇಡಿಕೆ ಹಾಕಿದ್ದರು.
ಈ ಬಗ್ಗೆ ಲಿಂಗರಾಜು ಅವರು ಮಾರ್ಚ್ 2 ರಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಅದೇ ದಿನ ಸಂಜೆ ಭದ್ರಾವತಿ ಬಿಇಒ ಕಚೇರಿಯ ಕೊಠಡಿಯಲ್ಲಿ ಲಿಂಗರಾಜು ಅವರಿಂದ 1 ಲಕ್ಷ ರೂ. ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣ ವನ್ನು ಜಪ್ತಿ ಮಾಡಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ಬಿಇಒ ಎ.ಕೆ. ನಾಗೇಂದ್ರಪ್ಪ ಮತ್ತು ಮಧ್ಯವರ್ತಿ ಮಂಜುನಾಥ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದು, ಪ್ರಕರಣವು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ-2018) ಕಲಂ 7(ಎ) ಅಡಿಯಲ್ಲಿ ದಾಖಲಿಸಲಾಗಿದೆ.
ಸುದ್ದಿ ಸಂತೆ ನ್ಯೂಸ್ ಶಿವಮೊಗ್ಗ…..



