ತರಕಾರಿ ಮಾರಾಟ ಮಾಡುವ ಮಹಿಳೆಗೆ ಒಲಿದು ಬಂತು ಗ್ರಾಮ ಪಂಚಾಯತಿ ಅಧ್ಯಕ್ಷ ಪಟ್ಟ……

Suddi Sante Desk

ಲಕ್ಷ್ಮೇಶ್ವರ –

ಸಾಮಾನ್ಯವಾಗಿ ಯಾರ ಹಣೆ ಬರಹದಲ್ಲಿ ಏನು ಬರೆದಿರುತ್ತದೆ ಎನ್ನೊದಕ್ಕೆ ಈ ಮಹಿಳೆಯೇ ಸಾಕ್ಷಿ. ಊರೂರು ಸುತ್ತಿ ತರಕಾರಿ ಮಾರುವ ಬಡ ಕುಟುಂಬದ ಮಹಿಳೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಟ್ಟ ಒಲಿದು ಬಂದಿದೆ.ಚುನಾವಣೆಯಲ್ಲಿ ಗೆಲ್ಲಲು ಹಣ, ಜಾತಿ ಸೇರಿದಂತೆ ಅನೇಕ ಬಲಾಬಲಗಳು ಬೇಕು ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಆದರೆ ಇವೆಲ್ಲದರ ನಡುವೆ ಗದಗನ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದ ಹುಲಿಗೆವ್ವ ಲಕ್ಷ್ಮಣ ಭಜಂತ್ರಿ ಅವರಿಗೆ ಇದಾವುದರ ಬಲ ಇಲ್ಲದಿದ್ದರೂ ಜನಬಲ ಮತ್ತು ಅದೃಷ್ಟ ಬಲದಿಂದ ಈಗ ಗ್ರಾಮದ ಅಧ್ಯಕ್ಷೆ ಪಟ್ಟ ಒದಗಿ ಬಂದಿದೆ.

ಯಳವತ್ತಿ ಗ್ರಾಪಂಗೆ ನಡೆದ ಚುನಾವಣೆಯಲ್ಲಿ ಹುಲಿಗೆವ್ವ ಜನಬಲದಿಂದ ಜಯಶಾಲಿಯಾಗಿದ್ದರು. ಗ್ರಾಪಂ ಅಧ್ಯಕ್ಷೆ ಸ್ಥಾನ SC ಮಹಿಳೆಗೆ ಮೀಸಲಾಗಿ ದ್ದರಿಂದ ಇರುವ ಏಕೈಕ ಸದಸ್ಯೆಗೆ ನಿರಾಯಾಸವಾಗಿ ಅಧ್ಯಕ್ಷ ಪಟ್ಟ ಒಲಿದು ಬಂದಿದೆ. ಹುಲಿಗೆವ್ವನ ಕುಟುಂಬಕ್ಕೆ ತೀರಾ ಹಳೆಯದಾದ ಜೋಪಡಿ ಮನೆ ಬಿಟ್ಟರೆ ಬೇರೆ ಆಸ್ತಿ ಇಲ್ಲ.

ಗ್ರಾಮೀಣ ಸಂತೆಗಳಲ್ಲಿ ತರಕಾರಿ ಮಾರಾಟ ಮಾಡಿ ಬದುಕು ಸಾಗಿಸುತ್ತ ಬಂದಿದ್ದಾರೆ. ಇದರೊಟ್ಟಿಗೆ ಗ್ರಾಮದಲ್ಲಿ ಗೂಡಂಗಡಿಯಲ್ಲಿ ನಿತ್ಯ ತರಕಾರಿ ವ್ಯಾಪಾರ ಮಾಡುತ್ತಾರೆ. ಪತಿ ಪಾರಂಪರಿಕವಾಗಿ ಬಂದ ಶಹನಾಯಿ ಭಾರಿಸುವ ಕಾಯಕ ಮಾಡುತ್ತಾರೆ.ಹಿರಿಯ ಮಗ ಪಿಯುಸಿ, ಮತ್ತೊಬ್ಬ ಎಸ್ಎಸ್ಎಲ್ಸಿ ಓದುತ್ತಿದ್ದಾನೆ. ಮಗಳನ್ನು ಮದುವೆ ಮಾಡಿಕೊಡಲಾಗಿದೆ.

ತಾನಿರುವ ಜೋಪಡಿ ತೆರವುಗೊಳಿಸಿ ವಸತಿ ಯೋಜನೆಯಡಿ ಮನೆ ಕಟ್ಟಿಕೊಳ್ಳಬೇಕೆಂಬ ಆಸೆಯಿಂದ ಗ್ರಾಪಂಗೆ ಅರ್ಜಿ ಸಲ್ಲಿಸಿ ಎಡತಾಕಿ ದ್ದರೂ ಪ್ರಯೋಜನವಾಗಿರಲಿಲ್ಲ. ಆದರೆ, ಈಗ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬಂತೆ ಗ್ರಾಮದ ಜನರಿಗೆ ಮೂಲ ಸೌಲಭ್ಯ ಕಲ್ಪಿಸುವ ಅರ್ಜಿ ಸಹಿ ಮಾಡುವ ಅದೃಷ್ಟ ಹುಲಿಗೆವ್ವಳಿಗೆ ಒಲಿದು ಬಂದಿದೆ.ಏನೇ ಆಗಲಿ ಬಡ ಕುಟುಂಬದ ತರಕಾರಿ ಮಾರಾಟ ಮಾಡುವ ಮಹಿಳೆಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ಒಲಿದು ಬಂದಿದ್ದು ನಿಜಕ್ಕೂ ಅಚ್ಚರಿಯನ್ನುಂಟು ಮಾಡಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.