ಬೆಂಗಳೂರು –
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಬಹುಲಾವ್ ನೀಡಿದೆ.ಕರೆ ಬರುತ್ತಿದ್ದಂತೆ ಭಾನುವಾರ ಬೆಳಗ್ಗೆಯೇ ಅವರು ದೆಹಲಿಗೆ ಹೊರಡಲಿದ್ದಾರೆ.ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ ಸಿಂಗ್ ಯಡಿಯೂರಪ್ಪ ಅವರಿಗೆ ಕರೆ ಮಾಡಿ ದೆಹಲಿಗೆ ಬರುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 8 ಗಂಟೆಗೆ ಬೆಂಗಳೂರಿನಿಂದ ಯಡಿಯೂರಪ್ಪ ದೆಹಲಿಗೆ ಹೊರಡಲಿದ್ದಾರೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಗಳ ವಿಷಯವಾಗಿ ಹೈಕಮಾಂಡ್ ಜೊತೆ ಯಡಿಯೂರಪ್ಪ ಚರ್ಚೆ ನಡೆಸುವ ನಿರೀಕ್ಷೆ ಇದೆ. ಸಂಕ್ರಾಂತಿ ಹೊತ್ತಿಗೆ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಪ್ಪಿಗೆ ನೀಡಲಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.
ಹೈಕಮಾಂಡ್ ಒಪ್ಪಿಗೆ ಕೊಟ್ಟ ತಕ್ಷಣ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಇಂದು ಬೆಳಗ್ಗೆ ಯಡಿಯೂರಪ್ಪ ಕೊಪ್ಪಳದಲ್ಲಿ ಹೇಳಿಕೆ ನೀಡಿದ್ದರು. ಸಂಜೆಯ ಹೊತ್ತಿಗೆ ದೆಹಲಿಗೆ ಕರೆ ಬಂದಿದೆ.
ಬೆಳಗಾವಿ ಲೋಕಸಭೆ ಮತ್ತು ಬಸವಕಲ್ಯಾಣ ಉಪಚುನಾವಣೆ ವಿಷಯವಾಗಿಯೂ ಹೈಕಮಾಂಡ್ ಯಡಿಯೂರಪ್ಪ ಜೊತೆ ಚರ್ಚಿಸಬಹುದು. ಶೀಘ್ರದಲ್ಲಿ ಈ ಚುನಾವಣೆಗಳು ಘೋಷಣೆಯಾಗುವ ಸಾಧ್ಯತೆ ಇದೆ. ಹಾಗಾಗಿ ಸಂಪುಟ ವಿಸ್ತರಣೆಯೇ ನಾಳೆಯ ಹೈಕಮಾಂಡ್ ಭೇಟಿಯ ಅಜೆಂಡಾವೋ ಅಥವಾ ಇನ್ನೇನಾದರೂ ಇದೆಯೋ ಎನ್ನುವುದನ್ನು ಕಾದು ನೋಡಬೇಕಿದೆ. ಯಡಿಯೂರಪ್ಪ ಅವರಿಗೆ ದೆಹಲಿಗೆ ಬುಲಾವ್ ಬರುತ್ತಿದ್ದಂತೆ ಇತ್ತ ಸಚಿವಾಕಾಂಕ್ಷಿಗಳಲ್ಲಿ ಆಸೆ ಚಿಗುರಿದೆ.