ಬೆಂಗಳೂರು –
ಕನ್ನಡದ ವರನಟ ಡಾ.ರಾಜ್ ಕುಮಾರ್ ಅವರನ್ನು ಅಪಹರಿಸಿದ್ದ ನರಹಂತಕ ವೀರಪ್ಪನ್ ಗೆ ಕೋಟ್ಯಂತರ ಹಣವನ್ನು ರಾಜ್ಯ ಸರ್ಕಾರ ಕೊಟ್ಟಿತ್ತು ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ. ಅಣ್ಣಾವ್ರನ್ನು ಬಿಡುಗಡೆ ಮಾಡಲು ಮೂರು ಹಂತದಲ್ಲಿ 15.22 ಕೋಟಿ ರೂಪಾಯಿಯನ್ನು ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ ನೀಡಿತ್ತು ಎಂಬ ಮಾಹಿತಿ ಪತ್ರಕರ್ತ ಶಿವಸುಬ್ರಮಣ್ಯನ್ ಅವರು ಬರೆದಿರುವ ಪುಸ್ತಕದಲ್ಲಿ ರಿವೀಲ್ ಆಗಿದೆ.

2000ರ ಜುಲೈ 30ರ ರಾತ್ರಿ ಗಾಜನೂರಿನ ತೋಟದ ಮನೆಯಿಂದ ಡಾ.ರಾಜ್‌ಕುಮಾರ್ ಹಾಗೂ ಇನ್ನಿತರ ಮೂವರನ್ನು ಅಪಹರಿಸಿದ್ದ ಆನೆದಂತ ಚೋರ ವೀರಪ್ಪನ್, ಅವರನ್ನು ಸತ್ಯಮಂಗಲ ಕಾಡಿನಲ್ಲಿ ಇರಿಸಿಕೊಂಡಿದ್ದ. 108 ದಿನಗಳ ನಂತರ ಅಂದರೆ ನವೆಂಬರ್ 15 ರಂದು ಬಿಡುಗಡೆ ಮಾಡಿದ್ದ.ಈ ನಡುವೆ ಡಾ.ರಾಜ್ ಗಾಗಿ ಲಕ್ಷಾಂತರ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ಮಾಡಿ ಹೋರಾಟ ನಡೆಸಿದ್ದರು.

ಡಾ.ರಾಜ್ ಬಿಡುಗಡೆಗಾಗಿ ನರಹಂತಕ ವೀರಪ್ಪನ್ ಹಣ ಪಡೆದಿದ್ದ ಎಂಬ ಚರ್ಚೆ ಈ ಹಿಂದಿನಿಂದಲೂ ಆಗುತ್ತಲೇ ಇದೆ. ಆದರೂ ಈ ಬಗ್ಗೆ ಅಂದಿನ ಸಿಎಂ ಎಸ್.ಎಂ.ಕೃಷ್ಣ ಮೌನವಹಿಸಿದ್ದರು. ಇದೀಗ ಈ ಪ್ರಶ್ನೆಗೆ ಪತ್ರಕರ್ತ ಶಿವಸುಬ್ರಮಣ್ಯನ್ ಉತ್ತರಿಸಿದ್ದಾರೆ.ಕಾಡಿನಲ್ಲಿ ವೀರಪ್ಪನ್ ನನ್ನು ಮೊದಲು ಭೇಟಿ ಮಾಡಿದ್ದ ಪತ್ರಕರ್ತ ಶಿವಸುಬ್ರಮಣ್ಯನ್, ತಾವು ಬರೆದ ‘ಲೈಫ್ ಆಯಂಡ ಫಾಲ್ ಆಫ್ ವೀರಪ್ಪನ್’ ಪುಸ್ತಕದಲ್ಲಿ 20 ವರ್ಷಗಳ ಬಳಿಕ ಡಾ.ರಾಜ್ ಅಪಹರಣದ ಸ್ಫೋಟಕ ಮಾಹಿತಿಯನ್ನ ಉಲ್ಲೇಖಿಸಿದ್ದಾರೆ.

ಅಣ್ಣಾವ್ರ ಬಿಡುಗಡೆಗೆ ವೀರಪ್ಪನ್ ಮೊದಲು ಡಿಮಾಂಡ್ ಮಾಡಿದ್ದು ಬರೋಬ್ಬರಿ 1 ಸಾವಿರ ಕೋಟಿ ರೂಪಾಯಿ. ಈ ಪೈಕಿ 900 ಕೋಟಿ ಮೌಲ್ಯದ್ದು ಗೋಲ್ಡ್, 100 ಕೋಟಿ ನಗದು ನೀಡುವಂತೆ ಕೇಳಿದ್ದನಂತೆ. ಕರ್ನಾಟಕದ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮೂರು ಹಂತದಲ್ಲಿ ಅಂದರೆ ಮೊದಲ ಎರಡು ಕಂತಿನಲ್ಲಿ ತಲಾ 5 ಕೋಟಿ, ಕೊನೆಯ ಕಂತಿನಲ್ಲಿ 5.22 ಕೋಟಿ ಹಣವನ್ನು ವೀರಪ್ಪನ್ ಗೆ ನೀಡಿದ್ದರು ಎಂದು ಶಿವಸುಬ್ರಮಣ್ಯನ್ ಹೇಳಿದ್ದಾರೆ.

ಹಣ ನೀಡುವುದಕ್ಕೂ ಮುನ್ನ ಸಾಟಲೈಟ್ ಫೋನ್ ಮುಖಾಂತರ ವೀರಪ್ಪನ್ ಜತೆ ಎಸ್.ಎಂ.ಕೃಷ್ಣ ಮಾತುಕತೆ ನಡೆಸಿದ್ದರು. 2000ರ ನವೆಂಬರ್ 13 ರಂದು ಹಣ ಸಂದಾಯವಾಗಿತ್ತು ಎಂದು ವಿವರಿಸಿದ್ದಾರೆ.
