ಪುದುಚೇರಿ –
ನಾರಾಯಣಸ್ವಾಮಿ ನೇತೃತ್ವದ ಪುದುಚೇರಿ ಕಾಂಗ್ರೆಸ್ ಸರ್ಕಾರ ಪತನವಾಗಿದೆ. ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ಬಹುಮತ ಸಾಬೀತು ಪಡಿಸಲು ವಿಫಲಗೊಂಡಿದೆ. ಸೋಮವಾರ ಬೆಳಗ್ಗೆ ಬಹುಮತ ಸಾಬೀತು ಪಡಿಸಲು ಸರ್ಕಾರ ವಿಫಲಗೊಂಡ ಹಿನ್ನೆಲೆಯಲ್ಲಿ ನಾರಾಯಣ ಸ್ವಾಮಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ನಾರಾಯಣ ಸ್ವಾಮಿ ಸರ್ಕಾರ ಬಹುಮತ ಸಾಬೀತು ಪಡಿಸಲು ವಿಫಲವಾದ ಕೂಡಲೇ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರದ ಸದಸ್ಯರು ಸದನದಿಂದ ಹೊರನಡೆದಿದ್ದಾರೆ. ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ಬಹುಮತ ಸಾಬೀತುಪಡಿಸಲು ವಿಫಲವಾಗಿದೆ ಎಂದು ಸ್ಪೀಕರ್ ವಿ.ಪಿ.ಶಿವಕೋಲುಂಧು ಘೋಷಿಸಿದ್ದಾರೆ.
ಬಹುಮತ ಸಾಬೀತುಪಡಿಸುವ ಸಂದಿಗ್ಧ ಪರಿಸ್ಥಿತಿಯಲ್ಲಿರುವ ನಾರಾಯಣಸ್ವಾಮಿ ಅವರಿಗೆ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ಇಬ್ಬರು ಶಾಸಕರು ಭಾನುವಾರ ರಾಜೀನಾಮೆ ನೀಡಿದ್ದು ನುಂಗಲಾಗದ ತುತ್ತಾಗಿ ಪರಿಣಮಿಸಿತ್ತು. ಹೀಗಾಗಿ ಸರ್ಕಾರ ಉಳಿಸಿಕೊಳ್ಳುವ ಸವಾಲು ಮತ್ತಷ್ಟು ಪ್ರಯಾಸವಾಗಿತ್ತು. ಕಾಂಗ್ರೆಸ್‌ನ ಕೆ. ಲಕ್ಷ್ಮೀನಾರಾ ಯಣನ್ ಮತ್ತು ಡಿಎಂಕೆಗೆ ಸೇರಿದ ವೆಂಕಟೇಶನ್ ರಾಜೀನಾಮೆ ನೀಡಿರುವ ಶಾಸಕರು.
ಈ ಇಬ್ಬರ ರಾಜೀನಾಮೆಯಿಂದಾಗಿ, 33 ಸದಸ್ಯರನ್ನೊಳಗೊಂಡ ಸದನದಲ್ಲಿ ಆಡಳಿತಾರೂಢ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ಶಾಸಕರ ಸಂಖ್ಯೆ 11ಕ್ಕೆ ಕುಸಿದಿದೆ. ಆದರೆ, ವಿರೋಧ ಪಕ್ಷ 14 ಶಾಸಕರನ್ನು ಹೊಂದಿದೆ.ಏಳು ಸ್ಥಾನಗಳು ಖಾಲಿ ಉಳಿದಿವೆ. ಮಾಜಿ ಸಚಿವರಾದ ಎ.ನಮಶಿವಾಯಂ ಮತ್ತು ಮಲ್ಲಾಡಿ ಕೃಷ್ಣರಾವ್ ಸೇರಿದಂತೆ ನಾಲ್ವರು ಕಾಂಗ್ರೆಸ್ ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ನಮಶಿವಯಂ ಈಗಾಗಲೇ ಬಿಜೆಪಿ ಸೇರಿದ್ದಾರೆ. ಮತ್ತೊಬ್ಬ ಶಾಸಕರನ್ನು ಈ ಮೊದಲೇ ಅನರ್ಹಗೊಳಿಸಲಾಗಿತ್ತು.ಒಟ್ಟಾರೆ ಪುದುಚೇರಿ ಸರ್ಕಾರ ಪತನವಾಗಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು.