ಮಂಗಳೂರು –
ಸರ್ವೇಯರ್ ರೊಬ್ಬರು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ನಗರ ಸರ್ವೇಯರ್ ಗಂಗಾಧರ ಎಂ. ಲಂಚ ಸ್ವೀಕರಿಸುತ್ತಿರುವಾಗಲೇ ಮಂಗಳೂರಿನ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.ಮಂಗಳೂರಿನ ನಗರದಲ್ಲಿ ಉದ್ಯಮಿಯೋರ್ವರು ತಮ್ಮ ಕಚೇರಿಯ ಪೀಠೋಪಕರಣ ಮಾಡಿಸಲು ತಮ್ಮ ಮನೆಯ ಆವರಣದಲ್ಲಿ ಇದ್ದ ಸಾಗುವಾನಿ ಮರವನ್ನು ಕಡಿಯಲು ಅರಣ್ಯ ಇಲಾಖೆಗೆ ಅನುಮತಿ ಕೋರಿ ಪತ್ರ ಬರೆದಿದ್ದರು. ಮಂಗಳೂರು ನಗರದ ಅರಣ್ಯ ಇಲಾಖೆ ಈ ಪತ್ರವನ್ನು ಕಂದಾಯ ಇಲಾಖೆಗೆ ಕಳಿಸಿತ್ತು.ತಿಂಗಳು ಕಳೆದರೂ ಸ್ಥಳ ಪರಿಶೀಲನೆಗೆ ಸರ್ವೇಯರ್ ಗಂಗಾಧರ್ ಬಂದಿರಲಿಲ್ಲ. ಈ ಬಗ್ಗೆ ಕೇಳಿದಾಗ 3 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಕಂದಾಯ ಇಲಾಖೆಗೆ ಕಟ್ಟಬೇಕಾದ 600 ರೂ. ಜೊತೆಗೆ ಲಂಚದ ಹಣ 3 ಸಾವಿರ ರೂ. ನೀಡಿ ಮತ್ತೊಂದು ತಿಂಗಳು ಕಳೆಯಿತು. ಮತ್ತೆ ಮರ ಇರುವ ಸ್ಥಳದ ನಕಾಶೆ ನೀಡಲು 30 ಸಾವಿರ ರೂ. ಡಿಮ್ಯಾಂಡ್ ಇಟ್ಟಿದ್ದರು.ಇದರಿಂದ ಮನನೊಂದ ಉದ್ಯಮಿ, ಮಂಗಳೂರಿನ ಪರಿಸರ ಸಂರಕ್ಷಣಾ ಸದಸ್ಯರ ಗಮನಕ್ಕೆ ಈ ವಿಚಾರವನ್ನು ತಂದಿದ್ದರು.

ತಕ್ಷಣ ಇದನ್ನು ಮಂಗಳೂರಿನ ಎಸಿಬಿ ಇನ್ಸ್ಪೆಕ್ಟರ್ ಶ್ಯಾಮಸುಂದರ್ ಅವರ ಗಮನಕ್ಕೆ ತರಲಾಯಿತು. 3 ದಿನಗಳ ಮುಂಜಾಗ್ರತಾ ಕಾರ್ಯಾಚರಣೆ ಮಾಡಿದ ಎಸಿಬಿ ಅಧಿಕಾರಿಗಳು ಮಂಗಳೂರಿನ ಮಿನಿ ವಿಧಾನ ಸೌಧದ ಬಳಿ 20 ಸಾವಿರ ರೂ. ಲಂಚದ ಹಣ ಪಡೆದುಕೊಳ್ಳುವ ಸಮಯ ಸಾಕ್ಷಿ ಸಮೇತ ಸರ್ವೇಯರ್ ಗಂಗಾಧರ್ ಎಂ. ಅವರನ್ನು ಬಂಧಿಸಿದ್ದಾರೆ.