ಸಿಂಧನೂರು –
ಸಾರ್ವಜನಿಕ ವಂತಿಗೆ,ದೇಣಿಗೆ ಸಂಗ್ರಹಿಸಿ ಅನೇಕ ಕಾರ್ಯ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಶಿಕ್ಷಣ ಇಲಾಖೆಯ ನೌಕರರೇ ಕೈಲಾದಷ್ಟು ನೆರವಿನ ಹಸ್ತ ಚಾಚುವ ಮೂಲಕ ಮಾದರಿ ಸಮೂಹ ಸಂಪನ್ಮೂಲ ಕೇಂದ್ರ(ಸಿಆರ್‌ಪಿ ಕ್ಲಸ್ಟರ್)ಸೃಜಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.ತಾಲೂಕಿನ ದೇವಿಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು-ಸಮೂಹ ಸಂಪ ನ್ಮೂಲ ವ್ಯಕ್ತಿಯ ಪರಿಶ್ರಮದಿಂದಲೇ ಶಿಕ್ಷಕರನ್ನು ಹೊಸ ಯೋಜನೆಗಳ ಅನುಷ್ಠಾನಕ್ಕೆ ತಕ್ಕಂತೆ ತರಬೇತಿಗೊಳಿಸಲು ಕೇಂದ್ರ ಸಜ್ಜುಗೊಳಿಸಲಾಗಿದೆ.ಸಾರ್ವಜನಿಕ ಶಿಕ್ಷಣ ಅಭಿ ಯಾನ (ಎಸ್ ಎಸ್‌ಎ) ಯೋಜನೆ ಚಾಲ್ತಿಯಲ್ಲಿದ್ದಾಗ ಸಕ್ರಿಯವಾಗಿದ್ದಾಗ ಚಟುವಟಿಕೆ ಕೇಂದ್ರವಾಗಿದ್ದ ಸಮೂಹ ಸಂಪನ್ಮೂಲ ಕೇಂದ್ರಗಳು ಅನುದಾನ ಕಡಿತವಾದ ಬಳಿಕ ಸಪ್ಪೆಯಾಗಿವೆ.ಅವುಗಳಿಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ಶಿಕ್ಷಕರ ಸ್ವಯಂ ಪ್ರೇರಿತ ಪ್ರಯತ್ನಗಳು ಇಲ್ಲಿ ಯಶಸ್ವಿ ಕಂಡಿವೆ.

ಪ್ರತಿ ಕ್ಲಸ್ಟರ್ ಗಳು 10-12 ಗ್ರಾಮದ ಸರ್ಕಾರಿ, ಶಾಲೆಗಳ ನ್ನು ಒಳಗೊಂಡಿರುತ್ತವೆ.ಅಲ್ಲಿ ಇಡೀ ಕ್ಲಸ್ಟರ್‌ನ ಶಿಕ್ಷಕರ ಸಂಖ್ಯೆ,ಹಾಜರಾತಿ,ಮಕ್ಕಳ ಸಂಖ್ಯೆಯ ವಿವರ ಲಭ್ಯವಾ ದಾಗ ಆಯಾ ವ್ಯಾಪ್ತಿಯಲ್ಲಿ ಸರ್ಕಾರಿ ಶಿಕ್ಷಣ ಸಬಲೀಕರಣ ಗೊಳಿಸುವುದಕ್ಕೆ ಸಮೂಹ ಸಂಪನ್ಮೂಲ ವ್ಯಕ್ತಿಗೆ ಸುಲಭ ವಾಗುತ್ತದೆ.ಆ ನಿಟ್ಟಿನಲ್ಲಿ ಗಿರೀಶ ವಿ.ಬಿ.ಪ್ರಯತ್ನದ ಫಲ ವಾಗಿ ಶಿಕ್ಷಕರು ಸಾತ್ ಕೊಟ್ಟ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆ ಯಲ್ಲಿ ಲಭ್ಯ ಕೊಠಡಿಯನ್ನು ಶಿಕ್ಷಕರನ್ನು ಹೊಸ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ತಕ್ಕಂತೆ ಸಜ್ಜುಗೊಳಿಸುವ ಕೇಂದ್ರವನ್ನು ಇಲ್ಲಿ ತೆರೆಯಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು,ನಾಡಿನ ಮಹನೀಯರು ಒಳಗೊಂಡಂತೆ ಎಲ್ಲರ ಭಾವಚಿತ್ರಗಳನ್ನು ಇಲ್ಲಿ ಅಳವಡಿಸಲಾಗಿದೆ.ಕ್ಲಸ್ಟರ್ ಕೇಂದ್ರವೇ 12 ಶಾಲೆಗಳ ಸಮಗ್ರ ಚಿತ್ರಣವನ್ನು ಸಾರಿ ಹೇಳುವಂತೆ ರೂಪಿಸಲಾಗಿದೆ.ಶಿಕ್ಷಕರು,ಮಕ್ಕಳು, ಜಾತಿ ವಾರು ಸಂಖ್ಯೆ ಸೇರಿದಂತೆ ಎಲ್ಲ ವಿವರ ಇಲ್ಲಿ ಅಂಗೈನಲ್ಲೇ ಎಂಬಂತೆ ಚಿತ್ರೀಕರಿಸಲಾಗಿದೆ.ಹೊಸ ಕ್ಲಸ್ಟರ್ ಕೇಂದ್ರಕ್ಕೆ ಸರಕಾರದಿಂದ ನಯಾ ಪೈಸೆ ಅನುದಾನ ಕೊಡಲಾಗಿಲ್ಲ. ಆದರೆ ಕ್ಲಸ್ಟರ್ ವ್ಯಾಪ್ತಿಗೆ ಒಳಪಡುವ ಚಿರತನಾಳ, ದೇವರ ಗುಡಿ,ಬೊಮ್ಮನಾಳ,ಕುನ್ನಟಗಿ,ಉರ್ದುಶಾಲೆ ಕುನ್ನಟಗಿ, ದುಗಮ್ಮನ ಗುಂಡಾ,ಗೀತಾ ಕ್ಯಾಂಪ್,ಕುನ್ನಟಗಿ ಕ್ಯಾಂಪಿನ ಸರ್ಕಾರಿ ಶಾಲೆಗಳು ಹಾಗೂ 3 ಖಾಸಗಿ ಶಾಲೆಯ ಶಿಕ್ಷಕರು ಈ ಕೇಂದ್ರವನ್ನು ರೂಪಿಸಲು ವೈಯಕ್ತಿಕವಾಗಿ ನೆರವು ನೀಡಿದ್ದಾರೆ.

ಶಿಕ್ಷಕರು ಸ್ಪರ್ಧೆಗೆ ಬಿದ್ದವರಂತೆ ಕೈಲಾದಷ್ಟು ನೆರವು ನೀಡಿದ ಪರಿಣಾಮ ಅಂದ-ಚೆಂದ ಕ್ಲಸ್ಟರ್ ರೂಪುಗೊಂಡಿದೆ. ಈ ಕೇಂದ್ರವನ್ನು ನೋಡುತ್ತಿದ್ದಂತೆ ಶಿಕ್ಷಣ ಇಲಾಖೆಯ ಸಮಗ್ರ ಯೋಜನೆಗಳು, ಸೌಲಭ್ಯಗಳು, ಅಲ್ಲಿನ ಸ್ಥಿತಿಗತಿಯ ಸಮಗ್ರ ನೋಟ ಕಣ್ಮುಂದೆ ಬರುತ್ತದೆ.ಅಕ್ಷರ ದಾಸೋಹ ಯೋಜನೆಯಡಿ ಕೆಲಸ ನಿರ್ವಹಿಸುವ ಬಿಸಿಯೂಟ ಕೆಲಸ ಗಾರರನ್ನು ಕೂಡ ಕ್ಲಸ್ಟರ್ ವ್ಯಾಪ್ತಿಯಲ್ಲಿ ತೊಡಗಿಸಿಕೊಂಡು ಅವರ ವಿಶ್ವಾಸ ಗಳಿಸಲಾಗಿದೆ. ಇದಕ್ಕೆ ಪೂರಕವೆಂಬಂತೆ ಕೆಲವು ದಿನಗಳ ಹಿಂದೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭ ಅವರಿಗೆ ಸೀರೆಗಳನ್ನು ಕೊಡಿಸಿ, ಸನ್ಮಾನಿಸಿ ಗೌರವಿಸಲಾಗಿದೆ.ಸರ್ಕಾರಿ ಶಾಲೆಗಳನ್ನು ಸದೃಢ ಗೊಳಿಸಿ ಅಲ್ಲಿ ವಿಶ್ವಾಸದ ವಾತಾವರಣ ಮೂಡಿಸುವುದಕ್ಕೆ ಶಿಕ್ಷಕರು ಕೂಡ ಕೈ ಜೋಡಿಸಿದ್ದರಿಂದ ಮಾದರಿ ಕೇಂದ್ರ ತಲೆ ಎತ್ತಿದೆ

ನಮ್ಮ ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಸಿಬ್ಬಂದಿಯೂ ಕೂಡ ಕೈ ಜೋಡಿಸಿದ್ದರಿಂದ ಸಮೂಹ ಸಂಪನ್ಮೂಲ ಕೇಂದ್ರ ಸ್ಥಾಪಿಸಿ ಶೈಕ್ಷಣಿಕ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗಿದೆ.ಇದು ನನ್ನ ಯಶಸ್ಸು ಅಲ್ಲ.ಕ್ಲಸ್ಟರ್ ವ್ಯಾಪ್ತಿಯ 12 ಶಾಲೆಗಳ ಸರ್ವ ಸಿಬ್ಬಂದಿಯ ಸಹಕಾರವೇ ಕಾರಣವಾಗಿದ್ದು ಇತರರಿಗೆ ಇದು ಮಾದರಿಯಾಗಿದೆ.