ಬೀದರ್ –
ಬಸ್ ಡಿಪೋದ ರೆಸ್ಟ್ ರೂಮಿನಲ್ಲಿಯೇ ಸಾರಿಗೆ ಸಂಸ್ಥೆಯ ಚಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೀದರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.

ಭಾಲ್ಕಿ ತಾಲೂಕಿನ ಡೊಂಗರಗಿ ಗ್ರಾಮದ ನಿವಾಸಿ ಚಾಲಕ ಓಂಕಾರ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಕಳೆದ 8 ವರ್ಷದಿಂದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು.

ಬಸ್ ನಂಬರ್ KA-32 F-926 ಸಂಖ್ಯೆಯ ಬಸ್ ಚಾಲನೆ ಮಾಡುತ್ತಿದ್ದ ಚಾಲಕ ಓಂಕಾರ್ ನಿನ್ನೆಯಿಂದ ಬಸ್ ಸಮೇತ ನಾಪತ್ತೆಯಾಗಿದ್ದರು.

ಆದರೆ ಇಂದು ಬೆಳಗ್ಗೆ ಡಿಪೋದ ರೆಸ್ಟ್ ರೂಮಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಬಗ್ಗೆ ತಿಳಿದುಬಂದಿದೆ.
ಇನ್ನೂ ಆತ್ಮಹತ್ಯೆಗೆ ಮೇಲಾಧಿಕಾರಿಗಳ ಕಿರುಕುಳವೋ ಅಥವಾ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಿನ್ನೆ ಚುನಾವಣೆ ನಿಮಿತ್ತ ಬಸ್ ತೆಗೆದುಕೊಂಡು ಹೋಗಿ ನಾಪತ್ತೆಯಾಗಿದ್ದರು. ಇನ್ನೂ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ..