ಬೆಂಗಳೂರು –
ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಭಾರತೀಯ ಜನತಾ ಪಾರ್ಟಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳಿಗೆ ಹೈಕಮಾಂಡ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಚುನಾವಣಾ ಕಣ ಇದೀಗ ರಂಗೇರಿದೆ.ಬಾಗಲಕೋಟೆ ವಿಧಾನಸಭಾ ಕ್ಷೇತ್ರ ದಿಂದ ಮಾಜಿ ಶಾಸಕ ಹಾಗೂ ಹಿರಿಯ ನಾಯಕ ವೀರಣ್ಣ ಚರಂತಿಮಠ್ ಅವರಿಗೆ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಬಿಜೆಪಿ ಅವಕಾಶ ನೀಡಿದೆ.
ಕ್ಷೇತ್ರದಲ್ಲಿ ಪ್ರಬಲ ಹಿಡಿತ ಹೊಂದಿರುವ ಚರಂತಿಮಠ್ ಅವರ ಹೆಸರನ್ನು ಅಂತಿಮಗೊಳಿಸುವ ಮೂಲಕ ಬಿಜೆಪಿ ಹಳೆ ಮುಖಕ್ಕೆ ಮನ್ನಣೆ ನೀಡಿದೆ. ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಅಚ್ಚರಿಯ ಆಯ್ಕೆಯಾಗಿ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಈ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡುವ ಉದ್ದೇಶದಿಂದ ಹೊಸ ಮುಖಕ್ಕೆ ಬಿಜೆಪಿ ಮಣೆ ಹಾಕಿದೆ.
ಈ ಎರಡು ಕ್ಷೇತ್ರಗಳ ಉಪಚುನಾವಣೆಯು ರಾಜ್ಯ ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿ ಎರಡಕ್ಕೂ ಪ್ರತಿಷ್ಠೆಯ ಕಣವಾಗಿದೆ. ಅಭ್ಯರ್ಥಿಗಳ ಘೋಷಣೆಯಾದ ಬೆನ್ನಲ್ಲೇ ಎರಡೂ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಕಾರ್ಯ ಚುರುಕುಗೊಂಡಿದ್ದು, ವರಿಷ್ಠರು ಮತ್ತು ಕಾರ್ಯ ಕರ್ತರು ಗೆಲುವಿಗಾಗಿ ರಣತಂತ್ರ ರೂಪಿಸಲು ಸಜ್ಜಾಗಿದ್ದು ಇತ್ತ ಈವರೆಗೆ ಕಾಂಗ್ರೆಸ್ ಯಾರನ್ನು ಕಣಕ್ಕೆ ಇಳಿಸಲಿದೆ ಎಂಬೊಂದು ಸಾಕಷ್ಟು ಪ್ರಮಾಣದಲ್ಲಿ ಕುತೂಹಲ ಕೆರಳಿಸಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


