ಬೆಂಗಳೂರು –
ರಾಜ್ಯದ ಸರ್ಕಾರಿ ಶಾಲೆಯ ಶಿಕ್ಷಕರ ಕೊರತೆ ಹೊಗಲಾಡಿ ಸಲು ಶೀಘ್ರವೇ ಐದು ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.ಬೆಂಗಳೂರಿನ ಸಾರಕ್ಕಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ದಾನಿ ವಿ.ಎಸ್.ರೆಡ್ಡಿ ಅವರು ನಿರ್ಮಾಣ ಮಾಡಿರುವ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳಲ್ಲಿರುವ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದರು
ಸರ್ಕಾರಿ ಶಾಲೆಯಲ್ಲಿ 15ರಿಂದ 20 ಸಾವಿರ ಶಿಕ್ಷಕರ ಕೊರತೆಯಿದ್ದು, ಈ ಹಿಂದೆಯೇ 10 ಸಾವಿರ ಶಿಕ್ಷಕರ ನೇಮಕಕ್ಕೆ ಮುಂದಾಗಿದ್ದರೂ, ಭರ್ತಿಯಾಗಿದ್ದು 3 ಸಾವಿರ ಶಿಕ್ಷಕರು. ಗುಣಮಟ್ಟದ ಕಲಿಕೆಗೆ ಅನುಕೂಲವಾಗುವಂತೆ ಶೀಘ್ರವೇ 5 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳಲಿದ್ದೇವೆ ಎಂದರು.ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಕೊರತೆ ಇಲ್ಲ. ಸಮರ್ಥ ಶಿಕ್ಷಕರಿದ್ದಾರೆ.2020ರ ಯುಪಿಎಸ್ ಇ ಪಾಸಾಗಿರುವವರಲ್ಲಿ ಹಲವು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಓದಿದ್ದಾರೆ.

ಅದರಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರೂ ಇದ್ದಾರೆ. ಈ ಮೂಲಕ ಕನ್ನಡ ಶಾಲೆಗಳು ಯಾವುದೇ ಪ್ರತಿಷ್ಠಿತ ಖಾಸಗಿ ಶಾಲೆಗೂ ಕಡಿಮೆಯಿಲ್ಲ ರಾಜ್ಯದಲ್ಲಿ 10 ಮಕ್ಕಳಿಗಿಂತ ಕಡಿಮೆ ಇರುವ 3,800ಕ್ಕೂ ಹೆಚ್ಚು ಶಾಲೆಗಳಿವೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಕಡಿಮೆ ಮಕ್ಕಳಿದ್ದರೂ ಶಾಲೆಗಳನ್ನು ಮುಂದುವರೆಸಲಾಗುತ್ತಿದೆ ಎಂದರು.

ಇನ್ನೂ ಪ್ರಮುಖವಾಗಿ ಶಿಕ್ಷಣದ ಗುಣಮಟ್ಟ ಉತ್ತಮ ವಾಗಿರಬೇಕು ಎಂಬ ಕಾರಣಕ್ಕೆ ಟಿಇಟಿ, ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತಿದೆ. ಸದ್ಯದಲ್ಲೇ 5 ಸಾವಿರ ಶಿಕ್ಷಕರ ನೇಮಕಕ್ಕೆ ಚಾಲನೆ ನೀಡಲಾಗುತ್ತದೆ. ಕೊರತೆ ನೀಗಿಸಲು ಅತಿಥಿ ಶಿಕ್ಷಕರ ನೇಮಕಕ್ಕೆ ಈಗಾಗಲೇ ಅವಕಾಶ ನೀಡಲಾಗಿದೆ ಎಂದು ಸಚಿವರು ಹೇಳಿದರು.