ಬೆಂಗಳೂರು –
ತಾನು ಉತ್ತರ ಕರ್ನಾಟಕ ಕಡೆಯ ಶಾಸಕರೊಬ್ಬರ ಗನ್‌ಮ್ಯಾನ್ ಎಂದು ಸುಳ್ಳು ಹೇಳಿಕೊಂಡು ಅಮಾಯಕರಿಂದ ಹಣ ಪಡೆದು ವಂಚನೆ ಮಾಡುತ್ತಿದ್ದ ಯುವಕನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ನಾರಾಯಣ ರಾಮಚಂದ್ರ ಹೆಗಡೆ ಎಂಬಾತನೇ ಬಂಧಿತನಾಗಿದ್ದಾನೆ.ಮೂಲತಃ ಉತ್ತರ ಕನ್ನಡ ಜಿಲ್ಲೆಯವನು. ಶಾಸಕರು-ಮಂತ್ರಿಗಳ ಭದ್ರತಾ ಸಿಬ್ಬಂದಿ ಯಂತೆ ತಾನೂ ಸಫಾರಿ ಸೂಟ್ ಧರಿಸಿ ತಿರುಗಾಡುತ್ತಿದ್ದ. ಸೊಂಟದಲ್ಲಿ ಗನ್ ಪೌಚ್ ನೇತಾಡುತ್ತಿರುತ್ತಿತ್ತು. ಅದರಲ್ಲಿ ಒಂದು ನಕಲಿ ಗನ್ ಕೂಡ ಇಟ್ಟುಕೊಂಡಿರುತ್ತಿದ್ದ. ಇವನನ್ನು ನೋಡಿದವ ರಿಗೆ ಈತ ನಿಜವಾಗಿಯೂ ಗನ್ ಮ್ಯಾನ್ ಇರಬಹುದು ಎನಿಸುತ್ತಿತ್ತು.
ಉದ್ಯೋಗ ಹುಡುಕುತ್ತಿದ್ದವರನ್ನು ಪರಚಯಿಸಿ ಕೊಳ್ಳುತ್ತಿದ್ದ ಈತ, ತಾನು ಶಾಸಕರಿಂದ ಶಿಫಾರಸು ಮಾಡಿಸಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ.ಹಣ ಪಡೆಯುತ್ತಿದ್ದ. ಬೇರೆ ಬೇರೆ ಇಲಾಖೆಗಳಲ್ಲಿ ನಾನಾ ರೀತಿಯ ಕೆಲಸಗಳಿಗಾಗಿ ಅಲೆದಾಡುತ್ತಿದ್ದವರ ಸಂಪರ್ಕಿಸಿ, ಬೇಗ ಕೆಲಸ ಮಾಡಿಸಿಕೊಡುವುದಾಗಿ ನಂಬಿಸಿ ಹಣ ಕೀಳುತ್ತಿದ್ದ. ನಂತರ ಅವರ ಕೈಗೆ ಸಿಗದೆ, ಫೋನ್ ಕಾಲ್ ಕೂಡ ಸ್ವೀಕರಿಸಿದೆ ತಲೆಮರೆಸಿಕೊಳ್ಳುತ್ತಿದ್ದ.
ಜನರಿಗೆ ನಂಬಿಕೆ ಬರಲೆಂದೇ ತನ್ನ ಫೇಸ್‌ಬುಕ್ ಖಾತೆಯಲ್ಲಿ ಈತ ಪೊಲೀಸರ ಜತೆಗಿರುವ ಫೋಟೋಗಳನ್ನು ಹಾಕಿಕೊಂಡಿದ್ದ. ಫೇಸ್‌ಬುಕ್ ಮೂಲಕ ಪರಿಚಯವಾದವರಿಗೂ ಇದೇ ರೀತಿ ನಂಬಿಸಿ ವಂಚಿಸುತ್ತಿದ್ದ. ಫೇಸ್‌ಬುಕ್‌ನಲ್ಲಿ ಈತನ ಫೋಟೋಗಳನ್ನು ನೋಡಿದ ದಾವಣಗೆರೆ ಕಡೆಯವರೊಬ್ಬರು ಈತನಿಗೆ ಹಣ ಕೊಟ್ಟು ಮೋಸ ಹೋಗಿದ್ದರು. ಎಷ್ಟು ಪ್ರಯತ್ನಿಸಿದರೂ ಹಣ ವಾಪಸ್ ಬರದೇ ಇದ್ದಾಗ ಈತನ ವಿರುದ್ಧ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಇನ್ಸ್‌ಪೆಕ್ಟರ್ ಶಿವಸ್ವಾಮಿ ನೇತೃತ್ವದ ತಂಡ ಈ ವಂಚಕನನ್ನು ಸಿಆರ್ ಗಾರ್ಡನ್ ಬಳಿ ಬಂಧಿಸಿದೆ. ಈತ ಇದೇ ರೀತಿ ಹಲವರಿಗೆ ವಂಚಿಸಿ ರುವ ಸಾಧ್ಯತೆ ಇದ್ದು, ಮೋಸಕ್ಕೆ ಒಳಗಾದ ವರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಕೋರಿದ್ದಾರೆ.