ವಿಜಯಪುರ –
ಬೆಳ್ಳಂಬೆಳಗ್ಗೆ ಮನೆ ಮುಂದೆ ಬಂದ ಕಸದ ಗಾಡಿಗೆ ಇಲ್ಲೊಬ್ಬ ಮಹಿಳೆ ಕಸದೊಂದಿಗೆ ಚಿನ್ನವನ್ನೇ ಹಾಕಿದ ಘಟನೆ ವಿಜಯಪುರದಲ್ಲಿ ನಡೆದಿದೆ.ಹೌದು ಇಂತಹ ವಿಚಿತ್ರ ಘಟನೆ ವಿಜಯಪುರದ 22ನೇ ವಾರ್ಡ್ ನಲ್ಲಿ ನಡೆದಿದೆ. ಶಂಕರ್ ಚವ್ಹಾಣ ಅವರ ಪತ್ನಿ ಚಿನ್ನದ ಮಾಂಗಲ್ಯ ಸರವನ್ನು ಕಸದೊಂದಿಗೆ ಗಾಡಿಗೆ ಹಾಕಿದ್ದಾರೆ.

ಕಸ ಗುಡಿಸುವಾಗ ಚಿನ್ನದ ಸರವೂ ಕಸದ ರಾಶಿಗೆ ಸೇರಿದ್ದು, ತಡವಾಗಿ ಗೃಹಿಣಿ ಗಮನಕ್ಕೆ ಬಂದಿದೆ. ಕಸ ಗೂಡಿಸಿ ಆಗಲೇ ಪಾಲಿಕೆ ಕಸದ ಗಾಡಿಗೆ ಹಾಕಿದ್ದು ಓಣಿಯಿಂದ ನಿರ್ಗಮಿಸಿದೆ. ಕೂಡಲೇ ಮಹಾನಗರ ಪಾಲಿಕೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಪಾಲಿಕೆ ಸಿಬ್ಬಂದಿ ತಕ್ಷಣಕ್ಕೆ ಆ ಗಾಡಿ ಚಾಲಕನಿಗೆ ಕರೆ ಮಾಡಿ ಕಸದ ರಾಶಿ ಖಾಲಿ ಮಾಡದೇ ಗಾಡಿ ನಿಲ್ಲಿಸುವಂತೆ ತಿಳಿಸಿದ್ದಾರೆ. ಇನ್ನೇನು ಕಸ ಚೆಲ್ಲಬೇಕೆಂದಿದ್ದ ಚಾಲಕ, ಸಿಬ್ಬಂದಿ ಕರೆ ಮೇರೆಗೆ ಕಸ ತುಂಬಿದ ಗಾಡಿಯೊಂದಿಗೆ ನಗರ ಹೊರವಲಯದಲ್ಲಿ ನಿಂತಿದ್ದಾನೆ. ಸ್ಥಳಕ್ಕೆ ಪಾಲಿಕೆಯ ಸಿಬ್ಬಂದಿ ತೆರಳಿ ಹುಡುಕಿಸಲಾಗಿ ಚಿನ್ನದ ಸರ ಸಿಕ್ಕಿದೆ.

ಕಾರ್ಮಿಕರು ಸೇರಿಕೊಂಡು ಹುಡುಕಾಡಿದ್ದಾರೆ. ಬಳಿಕ ಪಾಲಿಕೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಚವ್ಹಾಣ ಮನೆಗೆ ಆಗಮಿಸಿ ಚಿನ್ನದ ಸರ ನೀಡಿ ಪ್ರಾಮಾಣಿಕತೆ ಹಾಗೂ ನಿಷ್ಠೆ ಮೆರೆದಿದ್ದಾರೆ.

ಪೌರಕಾರ್ಮಿಕ-ಮೇಲ್ವಿಚಾರಕ ಗಿರೀಶ್ ಚಿಮ್ಮಲಗಿ ಹಾಗೂ ವಿಜಯ ಖಾಕಂಡಕಿ ಚಿನ್ನದ ಸರ ಹುಡುಕಿ ಶಂಕರ್ ಅವರಿಗೆ ಮರಳಿಸಿ ಆ ಕುಟುಂಬಸ್ಥರಲ್ಲಿ ಚಿನ್ನದ ನಗೆ ತರಿಸಿದ್ದಾರೆ.

ಪೌರ ಕಾರ್ಮಿಕರ ಹಾಗೂ ಪಾಲಿಕೆ ಸಿಬ್ಬಂದಿ ಕಾರ್ಯಕ್ಕೆ ಶಂಕರ್ ಕುಟುಂಬ ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸಿದೆ. ಇಂಥವರ ಸಂಖ್ಯೆ ಹೆಚ್ಚಲಿ ಎಂದು ಹಾರೈಸಿದ್ದಾರೆ. ಒಟ್ಟಿನಲ್ಲಿ ಚಿನ್ನವೂ ಕ್ಷಣಕಾಲ ಕಸವಾಗಿ ಮತ್ತೆ ವಾರಸುದಾರರ ಕೈಸೇರಿದ ಪ್ರಕರಣ ಸಾಕಷ್ಟು ಕುತೂಹಲ ಮೂಡಿಸಿದ್ದು ಪೌರ ಕಾರ್ಮಿಕರ ಕಾರ್ಯ ಮೆಚ್ಚಲೆಬೇಕು.