ತುಮಕೂರು –
ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಯ ಸಿಇಟಿ ಪರೀಕ್ಷೆ ಯಲ್ಲಿ ಅಕ್ರಮ ಆರೋಪದ ನಡುವೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಸ್ವಕ್ಷೇತ್ರ ತಿಪಟೂರಿನಲ್ಲಿ ಕೇಂದ್ರ ಸರ್ಕಾರದ ನವೋದಯ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಶಿಕ್ಷಕರೊಬ್ಬರು ತನ್ನ ಮಗನಿಗೆ ನೆರವು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಈ ಸಂಬಂಧ ಪರೀಕ್ಷೆ ಬರೆದಿದ್ದ ಮಕ್ಕಳ ಪೋಷಕರು ದೂರು ನೀಡಿದ್ದು ಕೇಂದ್ರ ಸರ್ಕಾರದ ವಸತಿ ಶಾಲೆಯ ಪ್ರವೇಶಾತಿಗಾಗಿ ನಡೆದ ಪ್ರವೇಶ ಪರೀಕ್ಷೆ ಯಲ್ಲಿ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರೊಬ್ಬರು ತನ್ನ ಮಗನಿಗೆ ನೆರವಾಗಿರುವ ಕುರಿತು ತನಿಖೆ ನಡೆಸುವಂತೆ ಡಿಡಿಪಿಐಗೆ ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಆದೇಶಿಸಿ ದ್ದಾರೆ.

ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದ ಮೇಲ್ವಿಚಾರಕಿಯಾಗಿದ್ದ ಪದ್ಮಾವತಿ ತನ್ನ ಮಗವಿಗೆ ಸಹಾಯ ಮಾಡಿರುವ ಆರೋಪ ಕೇಳಿಬಂದಿದೆ.ಈ ಪರೀಕ್ಷಾ ಕೇಂದ್ರದಲ್ಲಿನ ಪರೀಕ್ಷಾ ಮುಖ್ಯಸ್ಥ ಚೆನ್ನೇಗೌಡ ಪರೀಕ್ಷೆ ಬರೆಯುತ್ತಿದ್ದ ಬಾಲನಿಗೆ ತಾತನಾದರೆ ಆತ ತಂದೆ ಉಮೇಶ್ ಗೌಡ ಸರ್ಕಾರಿ ಬಾಲಕರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದ ಮುಖ್ಯಸ್ಥರಾಗಿದ್ದಾರೆ.ಮಕ್ಕಳು ಪರೀಕ್ಷೆ ಬರೆಯುತ್ತಿರುವ ಪರೀಕ್ಷಾ ಕೇಂದ್ರದಲ್ಲಿ ಪೋಷಕರು ಮೇಲ್ವಿ ಚಾರಕರಾದರೆ ಅದು ಅಪರಾಧ ಎಂದು ತುಮಕೂರಿನ ನವೋದಯ ಶಾಲೆಯ ಪ್ರಿನ್ಸಿಪಾಲ್ ಬೀನಾ ಹೇಳಿದ್ದಾರೆ.