ಗದಗ –
ನಗರದಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದ ಕಾಂಗ್ರೆಸ್ ಮುಖಂಡ ಶ್ರೀಧರ್ ವಜ್ರಬಂಡಿ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇಬ್ಬರು ಆರೋಪಿತರು ಪರಾರಿಯಾಗಿರುವ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಾಂಗ್ರೆಸ್ ಮುಖಂಡ ಶ್ರೀಧರ್ ವಜ್ರಬಂಡಿ,
ಚಾಲಕ ಸಿದ್ದಲಿಂಗಯ್ಯ ಮರಿಯಮ್ಮನವರ, ಪ್ರಮೋದ್ ಮಾನೇದ ಬಂಧಿತ ಆರೋಪಿಗಳಾಗಿದ್ದಾರೆ. ವಾಹನ ಮಾಲೀಕ ನಾಗರಾಜ್ ಹಾಗೂ ಗೋದಾಮಿನ ಮಾಲೀಕ ನಾಗರಾಜ್ ಮುರಗಿ ಪರಾರಿಯಾಗಿದ್ದಾರೆ.
ಆರೋಪಿತರು ಜಿಲ್ಲಾಡಳಿತ ಭವನದ ಎದುರಿಗಿರುವ ಕನ್ನಡ ಸಾಹಿತ್ಯ ಭವನದ ಹತ್ತಿರದ ಗೋದಾಮೊಂದರಿಂದ ಅಕ್ರಮ ಅಕ್ಕಿ ಸಾಗಿಸುತ್ತಿದ್ದರು. ಈ ವೇಳೆ ಪೊಲೀಸ್ ಇಲಾಖೆಯ ತುರ್ತು ಸ್ಪಂದನ ಸಹಾಯ ವ್ಯವಸ್ಥೆ ಸಂಖ್ಯೆ 112 ಕ್ಕೆ ಕರೆ ಬಂದಿದ್ದು, ಖಚಿತ ಮಾಹಿತಿ ಆಧಾರಿಸಿ ಬಿ.ವಿ. ಮಲ್ಲನಗೌಡರ ನೇತೃತ್ವದಲ್ಲಿ ಸಿಎಚ್‌ಸಿ ಎಸ್.ಎ. ಬಸಾಪೂರ್ ಅವರು ದಾಳಿ ನಡೆಸಿದ್ದಾರೆ.
ಆರೋಪಿಗಳು ಅಕ್ರಮವಾಗಿ ಅಕ್ಕಿ ತುಂಬಿದ್ದ ವಾಹನವನ್ನು ಬೆನ್ನಟ್ಟಿದ ಪೊಲೀಸರು ಮೂವರು ಆರೋಪಿತರನ್ನು ಬಂಧಿಸಿ, 50 ಕೆ.ಜಿ. ತೂಕದ 80 ಚೀಲಗಳನ್ನು ವಶಪಡಿಸಿಕೊಂಡು ಗದಗ ಗ್ರಾಮೀಣ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಹೆಚ್ಚಿನ ತನಿಖೆ ಕೈಗೊಂಡ ಗ್ರಾಮೀಣ ಸಿಪಿಐ ರವಿ ಕಪ್ಪತ್ತನವರ, ಸಾಹಿತ್ಯ ಭವನದ ಹತ್ತಿರವಿರುವ ಗೋದಾಮಿನ ಮೇಲೆ ದಾಳಿ ನಡೆಸಿ, ಅಲ್ಲಿ ಸಂಗ್ರಹಿಸಿಟ್ಟಿದ್ದ 2,79,000 ರೂ. ಮೌಲ್ಯದ 126 ಕ್ವಿಂಟಾಲ್ ಅಕ್ಕಿ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದ್ದು, ಆರೋಪಿಗಳು ಎಲ್ಲಿಗೆ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದರು ಎನ್ನುವುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.