ಶಿಕ್ಷಕರ ವರ್ಗಾವಣೆಗೆ ಗ್ರೀನ್ ಸಿಗ್ನಲ್
ಬೆಂಗಳೂರು
ಕೊನೆಗೂ ರಾಜ್ಯ ಸರ್ಕಾರ ಶಿಕ್ಷಕರಿಗೆ ಸಂತೋಷದ ಸುದ್ದಿಯನ್ನು ನೀಡಿದೆ. ಕಳೆದ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ವರ್ಗಾವಣೆ ಪ್ರಕ್ರಿಯೆಗೆ ಶಿಕ್ಷಣ ಇಲಾಖೆ ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ.

ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ನಡೆಯಲಿದ್ದು ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟ ಮಾಡಿದೆ. ನವಂಬರ್ 17 ರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದ್ದು ಕಳೆದ ಬಹು ದಿನಗಳಿಂದ ನಿರೀಕ್ಷೆ ಮಾಡುತ್ತಾ ಕಾಯುತ್ತಿದ್ದ ಶಿಕ್ಷಕರಿಗೆ ಕೊನೆಗೂ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.

ಇತ್ತ ವರ್ಗಾವಣೆಗೆ ಕಾಯುತ್ತಿದ್ದ ಶಿಕ್ಷಕ ಸಮುದಾಯಕ್ಕೇ ವರ್ಗಾವಣೆ ವೇಳಾಪಟ್ಟಿಯೊಂದಿಗೆ ಅಧಿಸೂಚನೆಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.ನವೆಂಬರ್ 11ರಂದು ಅಧಿಸೂಚನೆ ಪ್ರಕಟವಾಗಿದ್ದು, ಡಿಸೆಂಬರ್ 16 ಮತ್ತು 17ರಂದು ಪ್ರಾಥಮಿಕ ಶಾಲೆ ಹಾಗೂ 18 ಮತ್ತು 19ರಂದು ಪ್ರೌಢ ಶಾಲೆ ಶಿಕ್ಷಕರಿಗೆ ವರ್ಗಾವಣೆ ಕೌನ್ಸಿಲಿಂಗ್ ಗೆ ಪ್ರಕ್ರಿಯೆ ನಡೆಯಲಿದೆ.ಇನ್ನೂ ಇದಕ್ಕೂ ಮುನ್ನ ಮೊದಲು ಕಳೆದ ಸಾಲಿನಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ಹುದ್ದೆಯಡಿ ವರ್ಗಾವಣೆಯಾದವರಿಗೆ ಈ ಬಾರಿ ಮೊದಲ ಆದ್ಯತೆ ವರ್ಗಾವಣೆಯಲ್ಲಿ ಸಿಗಲಿದೆ.

ವರ್ಗಾವಣೆಗೆ ಶಿಕ್ಷಕ ಮಿತ್ರ ಆಪ್ ನಲ್ಲಿ ನವಂಬರ್ 30 ರವರೆಗೆ ವರ್ಗಾವಣೆಯಾಗ ಬಯಸುವ ಶಿಕ್ಷಕರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಆರಂಭಗೊಳ್ಳುವ ಪ್ರಕ್ರಿಯೆಗಳಲ್ಲಿ ಮೊದಲು ಡಿ 1 ರಿಂದ 11 ರವರೆಗೆ ವರ್ಗಾವಣೆಗೆ ಬಂದ ಅರ್ಜಿಗಳ ಪರಿಶೀಲನೆಯನ್ನು ಮಾಡಿ 15 ರಂದು ಅರ್ಹ ಅನರ್ಹರ ಪಟ್ಟಿಯನ್ನು ಪ್ರಕಟಣೆ ಮಾಡಲಾಗುತ್ತದೆ. ನಂತರ 16 ರಿಂದ 23 ರವಗೆ ವರ್ಗಾವಣೆಗೆ ಆಕ್ಷೇಪಣೆಗೆ ಅವಕಾಶ ನೀಡಲಾಗಿದ್ದು 24 ರಿಂದ 29 ರವರೆಗೆ ಅನರ್ಹರಿಗೆ ಹೇಳಿಕೆ ನೀಡಲು ಅವಕಾಶವನ್ನು ಶಿಕ್ಷಣ ಇಲಾಖೆ ನೀಡಿದೆ. ಇನ್ನೂ ಡಿಸೆಂಬರ್ 31 ರಂದು ಅರ್ಹರ ಅಂತಿಮ ಪಟ್ಟಿಯನ್ನು ಪ್ರಕಟ ಮಾಡಲಿರುವ ಶಿಕ್ಷಣ ಇಲಾಖೆ ಮೊದಲು ಜಿಲ್ಲೆಯ ಒಳಗೆ ಬಳಿಕ ಜಿಲ್ಲೆಯ ಹೊರಗೆ ಆನಂತರ ವಿಭಾಗದ ಒಳಗೆ ನಂತರ ವಿಭಾಗದ ಹೊರಗಿನ ಅರ್ಜಿಗಳ ಕೌನ್ಸಲಿಂಗ್ ನಡೆಯಲಿದೆ.