ಬೆಂಗಳೂರು –
ಸಿಬಿಐ ಹಾಗೂ ಇಡಿ ಅಧಿಕಾರಿಗಳು ಎಂದು ಹೇಳಿ ಉದ್ಯಮಿಗಳನ್ನು ಹೆದರಿಸಿ ಕೋಟ್ಯಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ ಆರೋಪಿಗಳಿಬ್ಬರು ಬೆಂಗಳೂರಿನಲ್ಲೇ ಸಿಬಿಐ ಬಲೆಗೆ ಬಿದ್ದಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಓರ್ವ ಶಾಸಕರೊಬ್ಬರ ಆಪ್ತ ಕಾರ್ಯದರ್ಶಿ. ಮತ್ತೊಬ್ಬ ಇಡಿ ಕಚೇರಿಯ ಮಲ್ಟಿ ಟಾಸ್ಕಿಂಗ್ ಆಫೀಸರ್ ಅಂದರೆ ಡಿ ದರ್ಜೆ ನೌಕರನಾಗಿದ್ದಾನೆ.

ಇಡಿ ನೌಕರ ಡಿ.ಚೆನ್ನಕೇಶವುಲು ಮತ್ತು ಶಾಸಕರೊಬ್ಬರ ಆಪ್ತ ಕಾರ್ಯದರ್ಶಿ ವೀರೇಶ್ ಬಂಧಿತರು. ಇವರಿಬ್ಬರೂ ಸ್ನೇಹಿತರು. ವೀರೇಶ್ ಸಿಬಿಐ ಇಲಾಖೆಯ ನಕಲಿ ಗುರುತಿನ ಚೀಟಿ ಹೊಂದಿದ್ದ. ಇಬ್ಬರೂ ಜತೆಯಾಗಿ ತಮ್ಮನ್ನು ಸಿಬಿಐ, ಇಡಿ ಅಧಿಕಾರಿಗಳೆಂದು ಬಿಂಬಿಸಿಕೊಂಡು ದೊಡ್ಡದೊಡ್ಡ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಉದ್ಯಮದಲ್ಲಿ ಅವ್ಯವಹಾರ ನಡೆಸುತ್ತಿದ್ದೀರಾ. ಹಣ ಕೊಡದಿದ್ದರೆ ದಾಳಿ ಮಾಡುವುದಾಗಿ ಬೆದರಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ.

ಇತ್ತೀಚೆಗೆ ಉದ್ಯಮಿ ಮಾಧವ ಶಾಸ್ತ್ರಿ ಎಂಬುವವರ ಬಗ್ಗೆ ಆರೋಪಿಗಳಿಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಮಾಧವ ಶಾಸ್ತ್ರಿ ಅವರನ್ನು ಭೇಟಿ ಮಾಡಿದ ಆರೋಪಿಗಳು ನಾವು ಇಡಿ, ಸಿಬಿಐ ಅಧಿಕಾರಿಗಳು ಎಂದು ನಕಲಿ ಐಡಿ ಕಾರ್ಡ್ ತೋರಿಸಿದ್ದರು. ‘ನೀವು ಉದ್ಯಮದಲ್ಲಿ ಅವ್ಯವಹಾರ ನಡೆಸಿರುವ ಬಗ್ಗೆ ಹಲವು ಆರೋಪಗಳು ಕೇಳಿ ಬಂದಿವೆ. ನಮಗೆ 1 ಕೋಟಿ ರೂ. ಲಂಚ ಕೊಡಬೇಕು. ಇಲ್ಲದಿದ್ದರೆ ನಿಮ್ಮ ಮನೆ, ಕಚೇರಿ ಮೇಲೆ ದಾಳಿ ನಡೆಸುತ್ತೇವೆ’ ಎಂದು ಬೆದರಿಸಿದ್ದರು.

ಆತಂಕಗೊಂಡ ಮಾಧವ ಶಾಸ್ತ್ರಿ ನನ್ನ ಬಳಿ ಅಷ್ಟೊಂದು ಹಣವಿಲ್ಲ. ಸದ್ಯ 6 ಲಕ್ಷ ರೂ. ಕೊಡುತ್ತೇನೆ ಎಂದು ಹೇಳಿದ್ದರು. ಸಿಕ್ಕಿದಷ್ಟು ದೋಚೋಣ ಎಂದುಕೊಂಡ ಆರೋಪಿಗಳು ಇದಕ್ಕೆ ಒಪ್ಪಿದ್ದರು. ಕೆಲ ದಿನಗಳ ಹಿಂದೆ ಬೆಂಗಳೂರಿನ ಐಷಾರಾಮಿ ಖಾಸಗಿ ಹೋಟೆಲ್ ವೊಂದಕ್ಕೆ ಮಾಧವ ಶಾಸ್ತ್ರಿಯನ್ನು ಕರೆಸಿಕೊಂಡು 6 ಲಕ್ಷ ರೂ. ಪಡೆದಿದ್ದರು. 6 ಲಕ್ಷ ರೂ. ಪೈಕಿ 1 ಲಕ್ಷ ರೂ.ಅನ್ನು ವೀರೇಶ್ ಗೆ ನೀಡಿದ ಚೆನ್ನಕೇಶವುಲು, ಉಳಿದ 5 ಲಕ್ಷ ರೂ. ತಾನೇ ಇಟ್ಟುಕೊಂಡಿದ್ದ ಎಂದು ತನಿಖೆಯಲ್ಲಿ ಗೊತ್ತಾಗಿದೆ.

ಆರೋಪಿಗಳ ನಡೆ, ವರ್ತನೆಯಿಂದ ಅನುಮಾನಗೊಂಡ ಮಾಧವ ಶಾಸ್ತ್ರಿ, ಆಪ್ತರ ಸಲಹೆ ಮೇರೆಗೆ ಈ ಕುರಿತು ಸಿಸಿಬಿಗೆ ದೂರು ನೀಡಲು ಮುಂದಾಗಿದ್ದರು. ಆದರೆ, ಸಿಸಿಬಿ ಅಧಿಕಾರಿಗಳು ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದೇಳಿ ಕಳಿಸಿದ್ದರು. ಆರೋಪಿಗಳು ಇಡಿ ಅಧಿಕಾರಿಗಳ ಸೋಗಿನಲ್ಲಿ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಇಡಿ ಕಚೇರಿಯಲ್ಲಿ ಮಾಧವ ಶಾಸ್ತ್ರಿ ದೂರು ನೀಡಲು ಹೋಗಿದ್ದರು. ಅಲ್ಲೂ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸಿಬಿಐಗೆ ದೂರು ನೀಡಬಹುದು ಎಂದು ಹೇಳಿ ಕಳಿಸಿದ್ದರು. ಇದಾದ ಬಳಿಕ ಮಾಧವಶಾಸ್ತ್ರಿ ಸಂಬಂಧಿಸಿದ ಸಿಬಿಐ ಅಧಿಕಾರಿಗಳನ್ನು ಭೇಟಿಯಾಗಿ ನಡೆದ ಸಂಗತಿ ವಿವರಿಸಿ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಬಿಐ, ತನಿಖೆ ನಡೆಸಿ ಬೆಂಗಳೂರಿನಲ್ಲಿ ಆರೋಪಿಗಳು ವಾಸಿಸುತ್ತಿದ್ದ ಮನೆ ಮೇಲೆ ಭಾನುವಾರ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಆರೋಪಿ ವೀರೇಶ್ ಮನೆಯಲ್ಲಿ 40 ಸಾವಿರ ರೂ. ಪತ್ತೆಯಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇಡಿ ವಿಭಾಗದ ಇನ್ಸ್ಪೆಕ್ಟರ್ ರೊಬ್ಬರ ಸೂಚನೆ ಮೇರೆಗೆ ಕೃತ್ಯವೆಸಗಿದ್ದು, ಲಂಚದ ರೂಪದಲ್ಲಿ ಪಡೆದ 5 ಲಕ್ಷ ರೂ. ಇನ್ಸ್ಪೆಕ್ಟರ್ ಗೆ ನೀಡಿರುವುದಾಗಿ ಚೆನ್ನಕೇಶವುಲು ಸಿಬಿಐ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈತನ ಹೇಳಿಕೆ ಆಧರಿಸಿ ತನಿಖೆ ಮುಂದುವರಿಸಿರುವ ಸಿಬಿಐ, ಸೂಕ್ತ ಸಾಕ್ಷ್ಯಾಧಾರ ಸಿಕ್ಕಿದರೆ ಸಂಬಂಧಿಸಿದ ಇಡಿ ಇನ್ಸ್ಪೆಕ್ಟರ್ ಅನ್ನು ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಮತ್ತೋರ್ವ ಆರೋಪಿ ವೀರೇಶ್ ಶಾಸಕ ಭೀಮಾನಾಯಕ್ ಪಿಎ ಎಂದು ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಈ ಹಿಂದೆ ಇದೇ ಮಾದರಿಯಲ್ಲಿ ಉದ್ಯಮಿಗಳಿಂದ ಆರೋಪಿಗಳು ಹಣ ಪಡೆದಿದ್ದಾರೆಯೇ? ಎಂಬ ಬಗ್ಗೆ ಸಿಬಿಐ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.