ಮೈಸೂರು –
ಅಪಘಾತದಲ್ಲಿ ತೀವ್ರ ಗಾಯಗೊಂಡು ರಕ್ತಸ್ರಾವದಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಯನ್ನ ತಮ್ಮ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಮೂಲಕ ದಕ್ಷಿಣ ವಲಯ ಐಜಿಪಿ ಹಿರಿಯ ಪೊಲೀಸ್ ಅಧಿಕಾರಿ ವಿಫುಲ್ ಕುಮಾರ್ ಮಾನವೀಯತೆ ಮೆರೆದಿದ್ದಾರೆ.ಹೌದು ಮೈಸೂರು ತಾಲೂಕು ಆಯರಹಳ್ಳಿ ಗ್ರಾಮದ ಶಿಕ್ಷಕ ರಂಗಸ್ವಾಮಿ ಅವರು ಮೈಸೂರಿನ ಸಿದ್ದಾರ್ಥನಗರ ರಿಂಗ್ ರಸ್ತೆ ಮೂಲಕ ತಮ್ಮ ಬೈಕಿನಲ್ಲಿ ಗ್ರಾಮಕ್ಕೆ ತೆರಳುವ ವೇಳೆ ದೊಡ್ಡ ಆಲದಮರದ ಬಳಿ ಆಯತಪ್ಪಿ ಬಿದ್ದಿದ್ದಾರೆ.
ಈ ವೇಳೆ ಬಿದ್ದ ರಭಸಕ್ಕೆ ತಲೆ ಹೊಡೆದು ರಕ್ತ ಸುರಿಯಲಾರಂಭಿಸಿದೆ. ಈ ಸಂದರ್ಭದಲ್ಲಿ ಮಲೆ ಮಹದೇಶ್ವರ ಬೆಟ್ಟದಿಂದ ಮೈಸೂರಿನ ಕಡೆಗೆ ಆಗಮಿಸುತ್ತಿದ್ದ ವಿಫುಲ್‌ಕುಮಾರ್ ಅವರು ಅಪಘಾತವನ್ನ ಗಮನಿಸಿ ಕಾರನ್ನ ನಿಲ್ಲಿಸಿದ್ದಾರೆ. ಜೊತೆಗೆ ಸ್ಥಳೀಯರ ನೆರವಿನಿಂದ ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದ ವ್ಯಕ್ತಿಯನ್ನ ತಮ್ಮ ಕಾರಿಗೆ ಕೂರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಸ್ತೆಯಲ್ಲಿ ಬಿದ್ದು ರಕ್ತದಲ್ಲಿ ಒದ್ದಾಡುತ್ತಿದ್ದ ಶಿಕ್ಷಕನ ಪರಿಸ್ಥಿತಿ ನೋಡಿ ನೆರವಾಗಿದ್ದಾರೆ. ಸದ್ಯ ಪೆಟ್ಟಾಗಿದ್ದ ಶಿಕ್ಷಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ ಐಜಿಪಿ ವಿಫುಲ್ ಕುಮಾರ್ ನಿಜವಾಗಿಯೂ ಈ ಮೂಲಕ ತಾವೊಬ್ಬ ಸಾಮಾನ್ಯ ಪೊಲೀಸ್ ಅಧಿಕಾರಿ ಹಾಗೇ ಜನಸ್ನೇಹಿ ಎಂಬುದನ್ನು ತಮ್ಮ ಕರ್ತವ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ.ಈ ಒಂದು ಕಾರ್ಯ ಮಾಡಿದ ಐಜಿಪಿ ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.