ಮೈಸೂರು –
ಕಳೆದ ವಾರವಷ್ಟೇ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಚ್.ಎನ್.ಬಾಲಕೃಷ್ಣ ಅವರನ್ನು ಅಮಾನತುಗೊಳಿಸಲಾಗಿದೆ.ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಎಸಿಬಿ ಠಾಣೆಯಲ್ಲಿ ಹೆಚ್.ಎನ್. ಬಾಲಕೃಷ್ಣ ವಿರುದ್ಧ ಪ್ರಕರಣ ದಾಖಲಾಗಿರುವ ಹಿನ್ನೆಲೆ ಯಲ್ಲಿ ಅವರನ್ನು ಪ್ರಧಾನ ಕಛೇರಿಯ ಆದೇಶದನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ವಿಜಯನಗರ ಠಾಣಾ ಉಸ್ತುವಾರಿಯನ್ನು ಸೈಬರ್ ಮಾದಕದ್ರವ್ಯ ಹಾಗೂ ಆರ್ಥಿಕ ಅಪರಾಧಗಳ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಯಕುಮಾರ್ ಅವರಿಗೆ ವಹಿಸಿ ಆದೇಶಿಸಿದ್ದಾರೆ.ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇರೆಗೆ ಎಸಿಬಿ ಪೊಲೀಸರು ಮಾ.16ರಂದು ಪ್ರಕರಣ ದಾಖಲಿಸಿಕೊಂಡು ಬಾಲಕೃಷ್ಣ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು.
ವಿಜಯನಗರದ ಎರಡನೇ ಹಂತದ ಬಾಡಿಗೆ ಮನೆ, ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಅವರ ತಂದೆಯ ಮನೆ,ಮಾವನ ಮನೆಯಲ್ಲಿ ಶೋಧ ನಡೆಸಿದ್ದರು. ದಾಳಿ ವೇಳೆ ಬಾಲಕೃಷ್ಣ ಅವರ ಮೈಸೂರಿನ ನಿವಾಸದಲ್ಲಿ ಹತ್ತು ಸಾವಿರ, ಹೊಳೆ ನರಸೀಪುರದ ಮನೆಯಲ್ಲಿ 50ಸಾವಿರ ರೂ.ನಗದು, 150ಗ್ರಾಂ ಚಿನ್ನಾಭರಣ,ಒಂದು ಕೆಜಿ ಬೆಳ್ಳಿ ಪದಾರ್ಥ,ಚನ್ನರಾಯಪಟ್ಟಣದಲ್ಲಿ ಒಂದು ಬೃಹತ್ ಕಟ್ಟಡ, 2ನಿವೇಶನ, 10ಗುಂಟೆ ಜಾಗ, ಮೈಸೂರಿನಲ್ಲಿ ಒಂದು ನಿವೇಶನವಿರುವ ದಾಖಲೆಪತ್ರಗಳು ಪತ್ತೆಯಾಗಿದ್ದವು.