ಬೆಂಗಳೂರು –
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಸೆಕ್ಸ್ ಸಿಡಿ ಬಹಿರಂಗ ಪ್ರಕರಣದಲ್ಲಿ ಮತ್ತೊಂದು ಸ್ಪೋಟಕ ಅಂಶ ಬೆಳಕಿಗೆ ಬಂದಿದೆ. ತನಿಖೆಯನ್ನು ಆರಂಭ ಮಾಡಿರುವ SIT ಅಧಿಕಾರಿ ಗಳಿಗೆ ಈ ಒಂದು ಪ್ರಕರಣದಲ್ಲಿ ಕೋಟ್ಯಂತರ ರೂ. ಹಣದ ವ್ಯವಹಾರ ನಡೆದಿರುವ ಮಾಹಿತಿ ಎಸ್‍ಐಟಿ ಅಧಿಕಾರಿಗಳಿಗೆ ದೊರೆತಿದೆ. ಈ ನಿಟ್ಟಿನಲ್ಲಿ ತನಿಖೆ ಯನ್ನು ತೀವ್ರಗೊಳಿಸಿದ್ದು. ಸಿಡಿ ಪ್ರಕರಣದಲ್ಲಿ ಸುಮಾರು 5 ಕೋಟಿಗೂ ಹೆಚ್ಚು ಹಣ ಹಲವರಿಗೆ ಹಂಚಿಕೆಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಹಣದ ಮೂಲ ಪತ್ತೆಹಚ್ಚುವತ್ತ ಗಮನ ಹರಿಸಿದ್ದಾರೆ.
ವಿಚಾರಣೆಗೆ ಕರೆತಂದಿದ್ದ ಹಲವಾರು ಟಿವಿ ಮಾಧ್ಯಮಗಳ ವರದಿಗಾರರು ಹಾಗೂ ಕೆಲವು ವ್ಯಕ್ತಿಗಳ ಬ್ಯಾಂಕ್ ಖಾತೆಗಳ ಮೇಲೆ ಎಸ್‍ಐಟಿ ನಿಗಾ ಇಟ್ಟಿದೆ. ಅವರುಗಳ ಖಾತೆಗಳಿಗೆ ಇತ್ತೀಚೆಗೆ ಎಷ್ಟೆಷ್ಟು ಹಣ ಬಂದಿದೆ ಎಂಬುದರ ಬಗ್ಗೆಯೂ ಬ್ಯಾಂಕ್ ಅಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.
ಈಗಾಗಲೇ ಶಂಕಿತ ವ್ಯಕ್ತಿಗಳ ಮನೆಗಳ ಮೇಲೆ ದಾಳಿ ನಡೆಸಿರುವ ಎಸ್‍ಐಟಿ ಈ ಬಗ್ಗೆ ಹಲವು ದಾಖಲೆ ಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಸಿಡಿಗಳು ಬಹಿರಂಗಗೊಳ್ಳಲು ಕೋಟ್ಯಂತರ ರೂ. ಹಣವನ್ನು ಯಾರು ಯಾರು ಕೊಟ್ಟಿದ್ದಾರೆ, ಹಣ ಪಡೆದವರು ಯಾರು, ಎಷ್ಟೆಷ್ಟು ಹಣ ಪಡೆದಿದ್ದಾರೆ ಎಂಬುದರ ಬಗ್ಗೆ ಎಸ್‍ಐಟಿ ಕೂಲಂಕಷವಾಗಿ ತನಿಖೆ ನಡೆಸುತ್ತಿದೆ.
ಇನ್ನೂ ವಿಚಾರಣೆಗೆ ಒಳಪಡಿಸಿ ಕಳುಹಿಸಿರುವ ವ್ಯಕ್ತಿಯೊಬ್ಬರ ಖಾತೆಗೆ 26 ಲಕ್ಷ ರೂ. ಹಣ ಸಂದಾಯವಾಗಿದೆ ಎಂಬುದರ ಬಗ್ಗೆ ಎಸ್‍ಐಟಿಗೆ ಮಾಹಿತಿ ದೊರೆತಿದ್ದು, ಪ್ರಕರಣದ ಕಿಂಗ್‍ಪಿನ್ ಬೇಟೆಯನ್ನು ತೀವ್ರಗೊಳಿಸಿದ್ದಾರೆ.