ಧಾರವಾಡ –
ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿದ್ದು ಮಾದರಿ ನೀತಿ ಸಂಹಿತೆ ಜಾರಿಯಾಗಿದೆ.ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿ ರುವ ಅಧಿಕಾರಿಗಳು,ನೌಕರರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು.ನಿರ್ಲಕ್ಷ್ಯ ತೋರುವ ಅಧಿಕಾರಿಗಳು,ನೌಕರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಇಂದು ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾರ್ಯಗಳಿಗೆ ನೇಮಕವಾಗಿರುವ ವಿವಿಧ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾದರಿ ನೀತಿ ಸಂಹಿತೆ, ಕಾನೂನು ಮತ್ತು ಸುವ್ಯವಸ್ಥೆ, ಮಾನವ ಸಂಪನ್ಮೂಲ ಹಾಗೂ ದತ್ತಾಂಶಗಳ ನಿರ್ವಹಣೆ, ಐಟಿ ಮತ್ತು ತಂತ್ರಜ್ಞಾನ ಬಳಕೆ, ಸಾರಿಗೆ,ತರಬೇತಿಗಳು, ಚುನಾವಣಾ ಸಾಮಗ್ರಿಗಳು,ಚುನಾವಣಾ ಖರ್ಚು-ವೆಚ್ಚದ ನಿಗಾ, ಮತಪತ್ರಗಳ ತಯಾರಿಕೆ, ಮಾಧ್ಯಮ ಸಂಪರ್ಕ, ಸಹಾಯವಾಣಿ ನಿರ್ವಹಣೆ ಮತ್ತು ವರದಿಗಳ ರವಾನೆ, ಮತಗಟ್ಟೆ ಮತ್ತು ಮತ ಎಣಿಕೆ ಸಿಬ್ಬಂದಿಗಳ ಆಹಾರ ವ್ಯವಸ್ಥೆ,ಮತಗಟ್ಟೆಗಳು ಹಾಗೂ ಕೋವಿಡ್-19 ರ ಮುನ್ನೆ ಚ್ಚರಿಕೆ ಕ್ರಮಗಳ ಪಾಲನೆಗಾಗಿ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗ ಳನ್ನು ನೇಮಿಸಿ,ಕರ್ತವ್ಯ,ಜವಾಬ್ದಾರಿಗಳನ್ನು ತಿಳಿಸಲಾಗಿದೆ. ಅಧಿಕಾರಿಗಳು ತಮ್ಮ ಸಮಿತಿಗಳ ಮೂಲಕ ಸಮರ್ಥ ವಾಗಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಸಂದೇಹಗಳು ಬಂದರೆ ತಕ್ಷಣ ನೇರವಾಗಿ ಜಿಲ್ಲಾಡಳಿತವ ನ್ನು ಸಂಪರ್ಕಿಸಿ,ಮಾರ್ಗದರ್ಶನ ಪಡೆಯಬಹುದು. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಕರ್ತವ್ಯ ಪ್ರಾಮುಖ್ಯತೆ ಹೊಂದಿದೆ. ನಿರ್ಲಕ್ಷ್ಯ ತೋರುವ, ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನ ತೊರೆಯುವ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.