ಮಡಿಕೇರಿ –
ಕೊಡವರು ಬೀಫ್ ತಿನ್ನುತ್ತಾರೆ ಎನ್ನುವ ಹೇಳಿಕೆ ನೀಡುವ ಮೂಲಕ ಇಡೀ ಕೊಡವ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಾಗಿದೆ.

ಕೊಡವ ಸಮಾಜದ ಮುಖಂಡ ಶಾಂತೆಯಂಡ ರವಿಕುಶಾಲಪ್ಪ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಂತೆಯಂಡ ರವಿಕುಶಾಲಪ್ಪ ಅವರು, ಸಿದ್ದರಾಮಯ್ಯ ವಿರುದ್ಧ ದೂರು ದಾಖಲಾಗಿದ್ದು ಕಾನೂನು ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರನ್ನು ಜ.7 ರಂದು ಸೆಕ್ಷನ್ 153 ರಡಿ ದಾಖಲಿಸಿಕೊಳ್ಳಲಾಗಿದ್ದು,ಇದಕ್ಕೆ ಜಾಮೀನು ಸಿಗಲಿದೆ. ಆದರೆ, ಇಡೀ ಕೊಡವ ಸಮುದಾಯವನ್ನು ತಮ್ಮ ಹೇಳಿಕೆಯ ಮೂಲಕ ಘಾಸಿಗೊಳಿಸಿರುವ ಸಿದ್ದರಾಮಯ್ಯ ಅವರ ವಿರುದ್ಧ ಸೆಕ್ಷನ್ 153ಎ, 295 ಎ ಅನ್ವಯ ಪ್ರಕರಣ ದಾಖಲಾಗಬೇಕಾಗಿತ್ತು. ಈ ಹಿನ್ನೆಲೆ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಮುಂದಿನ ನಡೆ ಬಗ್ಗೆ ನಿರ್ಧರಿಸುವುದಾಗಿ ಸ್ಪಷ್ಟಪಡಿಸಿದರು.

ಯಾರನ್ನೋ ಮೆಚ್ಚಿಸುವ ಉದ್ದೇಶದಿಂದ ಕೊಡವ ಸಮುದಾಯವನ್ನು ಅಪಮಾನಿಸುವ, ಹೀಯಾಳಿಸುವ ರೀತಿಯ ಹೇಳಿಕೆ ನೀಡಲಾಗಿದೆ. ಈ ಹಿಂದೆ ಟಿಪ್ಪು ಜಯಂತಿ ನಡೆಸಿಯೇ ಸಿದ್ಧ ಎನ್ನುವ ಮೂಲಕ ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲಿ ಕೋಮು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದರು. ಇದೀಗ ಹಸುವನ್ನು ತಾಯಿಯಂತೆ ಕಾಣುವ ಕೊಡವ ಸಮೂಹದ ಭಾವನೆಗೆ ದಕ್ಕೆ ತರುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವರು ಬಾಯಿ ತಪ್ಪಿನಿಂದ ಹಾಗೆ ಹೇಳಿದ್ದಾರೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು ಮಾತ್ರ ಸಮರ್ಥಿಸಿಕೊಂಡಿದ್ದು, ಉಳಿದ ಕಾಂಗ್ರೆಸ್ಸಿಗರ ಮೌನದ ಹಿಂದಿನ ಗುಟ್ಟೇನು ಎಂದು ರವಿಕುಶಾಲಪ್ಪ ಪ್ರಶ್ನಿಸಿದರು.

ಕೊಡವ ಸಮುದಾಯದ ವಿರುದ್ಧ ಹೇಳಿಕೆ ನೀಡಿರುವವರನ್ನು ಸಮರ್ಥಿಸುವ ಕಾಂಗ್ರೆಸ್ಸಿಗರ ವರ್ತನೆಯನ್ನು ನಾವಿಂದು ಪ್ರಶ್ನಿಸಬೇಕಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.