ಚಾಮರಾಜನಗರ
ಮದುವೆ ಸಹಾಯಧನ ಮಂಜೂರು ಮಾಡಲು ಫಲಾನುಭವಿಯೊಬ್ಬರಿಂದ ಮೂರು ಸಾವಿರ ಲಂಚ ಪಡೆಯುತ್ತಿದ್ದ ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕಿ ಹಾಗೂ ಕಂಪ್ಯೂಟರ್ ಆಪರೇಟರ್ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಯ ಸೀನಿಯರ್ ಲೇಬರ್ ಇನ್ಸ್‌ಪೆಕ್ಟರ್ ಗೀತಾ, ಕಂಪ್ಯೂಟರ್ ಆಪರೇಟರ್ (ಹೊರಗುತ್ತಿಗೆ) ಮಾಲತಿ ಎಸಿಬಿ ಬಲೆಗೆ ಬಿದ್ದ ನೌಕರರಾಗಿದ್ದಾರೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ಮದುವೆ ಸಹಾಯಧನ ನೀಡಲಾಗುತ್ತಿದ್ದು, ಇದನ್ನು ಪಡೆಯಲು ಅರ್ಜಿ ಸಲ್ಲಿಸಿದ್ದ ರಾಮಸಮುದ್ರದ ಫ್ಲಂಬರ್ ಕೆಲಸಗಾರ ಚೇತನ್ ಅವರಿಂದ ಗೀತಾ ಮತ್ತು ಮಾಲತಿ 3 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಆರೋಪಿಗಳಾದ
ಗೀತಾ ,ಮಾಲತಿ ಅನ್ನು ಬಂಧಿಸಿದ್ದು, ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ರಾಮಸಮುದ್ರದ ಚೇತನ್ 2020 ರಲ್ಲಿ ರೇಣುಕಾ ಎಂಬುವವರನ್ನು ವಿವಾಹವಾಗಿದ್ದು ಕಾರ್ಮಿಕ ಇಲಾಖೆಯಲ್ಲಿ ಮದುವೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಿದ್ದರು
ಈ ಸಂಬಂಧ ಕಾರ್ಮಿಕ ಇಲಾಖೆಯ ಕಂಪ್ಯೂಟರ್ ಆಪರೇಟರ್ ಮಾಲತಿ 2021ರ ಜ.21ರಂದು ಅರ್ಜಿದಾರ ಚೇತನ್‍ಗೆ ಕರೆ ಮಾಡಿ ಕಚೇರಿಗೆ ದಾಖಲೆಗಳನ್ನು ತರುವಂತೆ ಸೂಚಿಸಿದ್ದಾರೆ. ಜ.27ರಂದು ದಾಖಲೆಗಳನ್ನು ಮಾಲತಿ ಅವರಿಗೆ ಸಲ್ಲಿಸಿದಾಗ ಅವರು ಲೇಬರ್ ಇನ್ಸ್‌ಪೆಕ್ಟರ್ ಲತಾ ಅನ್ನು ಪರಿಚಯಿಸಿ ಮದುವೆ ಸಹಾಯಧನ ಮಂಜೂರು ಮಾಡಲು 3 ಸಾವಿರ ರೂ. ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದು ಚೇತನ್ ಎಸಿಬಿಗೆ ದೂರು ನೀಡಿದ್ದರು.
ಮೈಸೂರು ದಕ್ಷಿಣ ವಲಯದ ಡಿವೈಎಸ್ಪಿ ಜಯಪ್ರಕಾಶ್ ಮಾರ್ಗದರ್ಶನದಲ್ಲಿ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಸದಾನಂದ ಎ.ತಿಪ್ಪಣ್ಣವರ್ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.