ಬಾಗಲಕೋಟೆ –
ಎಸಿಬಿ ದಾಳಿಯಿಂದ ಬಾಗಲಕೋಟೆ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮುಖವಾಡ ಕಳಚಿಬಿದ್ದಿದೆ. ಪ್ರಕರಣವೊಂದರ ಮೇಲೆ ನಡೆದ ಎಸಿಬಿ ಅಧಿಕಾರಿಗಳು ದಾಳಿ ವೇಳೆ 4 ಕೋಟಿ 61 ಲಕ್ಷ ಮೌಲ್ಯ ಪರಿಹಾರದ 50 ಚೆಕ್ ಪತ್ತೆಯಾಗಿವೆ.
70 ಜನ ಕೃಷ್ಣಾ ಮೇಲ್ದಂಡೆ ಯೋಜನೆ ಫಲಾನುಭವಿಗಳಿಗೆ ಆರ್ಟಿಜಿಎಸ್ ಮಾಡಬೇಕಿದ್ದ ಪರಿಹಾರ ಚೆಕ್ ಗಳೆಂದು ತಿಳಿದುಬಂದಿದೆ. ಜನವರಿ 25ರಂದು ಎಸಿಬಿಯಿಂದ ಯುಕೆಪಿ (ಕೃಷ್ಣಾ ಮೇಲ್ದಂಡೆ ಯೋಜನೆ)ಕಚೇರಿ ಮೇಲೆ ದಾಳಿ ನಡೆದಿತ್ತು. ಭೂಪರಿಹಾರ ಹಣ ಜಮಾ ಮಾಡಲು ಯುಕೆಪಿಯ ಪುನರ್ವಸತಿ ಪುನರ್ ನಿರ್ಮಾಣ ಇಲಾಖೆ ಕಚೇರಿಯ ಎಫ್‌ಡಿಎ ಸುನಂದಾ ತೆಗ್ಗಿ, ಕಮತಗಿ ಪಟ್ಟಣದ ಸಂಗಪ್ಪ ಹಿರಾಳ ಎಂಬುವರಿಂದ 3 ಲಕ್ಷ 43 ಸಾವಿರ ಭೂಪರಿಹಾರ ಹಣ ಜಮಾ ಮಾಡಲು 4 ಸಾವಿರ ಲಂಚ ಕೇಳಿದ್ದರು.
ಯುಕೆಪಿ ಕೆನಾಲ್ ನಿರ್ಮಾಣಕ್ಕಾಗಿ ಸಂಗಪ್ಪನಿಗೆ ಭೂಪರಿಹಾರ ಜಮಾ ಮಾಡಲು ಲಂಚ ಕೇಳಿದ್ದರು.ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಸಂಶಯ ಬಂದ ಹಿನ್ನೆಲೆಯಲ್ಲಿ ಭೂಪರಿಹಾರಕ್ಕೆ ಸಂಬಂಧಿಸಿದಂತೆ ಎಸಿಬಿ ತಂಡ ತನಿಖೆಯನ್ನು ಮುಂದುವರೆಸಿತ್ತು. ತನಿಖೆ ವೇಳೆ 70 ಜನ ರೈತರಿಗೆ ಕೊಡಬೇಕಿದ್ದ 4 ಕೋಟಿ 61 ಲಕ್ಷ, 46 ಸಾವಿರದ 310 ರೂಪಾಯಿ ಮೌಲ್ಯದ 50ಕ್ಕೂ ಹೆಚ್ಚು ಅಧಿಕ ಚೆಕ್ ಗಳು ಪತ್ತೆಯಾಗಿವೆ. ಇವೆಲ್ಲವೂ ಸಹ ಬಾಕಿ ಇರುವ ಚೆಕ್ ಗಳಾಗಿವೆ.
ಎಲ್ಲರಿಂದಲೂ ಲಂಚ ಪಡೆದು ವಿತರಿಸುವ ಉದ್ದೇಶದಿಂದ ಚೆಕ್ ಗಳನ್ನು ತಡೆ ಹಿಡಿಯಲಾಗಿದೆ ಎಂಬ ಸಂಶಯ ಬಂದಿದೆ. ಇದೀಗ ಎಸಿಬಿ ಅಧಿಕಾರಿಗಳು, ಯುಕೆಪಿ ಲೆಕ್ಕಾಧಿಕಾರಿಗಳಿಗೆ ಭೂಪರಿಹಾರ ಜಮಾ ಮಾಡಲು ಸೂಚನೆ ನೀಡಿದ್ದು, ಆ ಬಳಿಕ ರೈತರ ಖಾತೆಗೆ ಪರಿಹಾರದ ಹಣ ಜಮಾ ಆಗಿದೆ.
ಎಸಿಬಿ ಉತ್ತರ ವಲಯ ಎಸ್ಪಿ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಬಾಗಲಕೋಟೆ ಎಸಿಬಿ ಡಿವೈಎಸ್ ಎಂ.ಕೆ.ಗಂಗಲ್ ನೇತೃತ್ವದಲ್ಲಿ ದಾಳಿ ನಡೆದಿತ್ತು. ಕೇವಲ ದಾಳಿ ನಡೆಸದೇ ಎಸಿಬಿ ತಂಡ ಪರಿಹಾರವನ್ನೂ ಕೊಡಿಸಿದೆ. ಮತ್ತೆ ಲಂಚಕ್ಕೆ ಬೇಡಿಕೆ ಇಟ್ಟರೆ ಎಸಿಬಿ ಕಚೇರಿಗೆ ತಿಳಿಸುವಂತೆ ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ