ತುಮಕೂರು –
ಶಾಲಾ ಆವರಣದಲ್ಲಿ ಮೊಬೈಲ್ ಟವರ್ ಅಳವಡಿಸಿರುವ ಘಟನೆ ತುಮಕೂರು ತಾಲ್ಲೂಕಿನ ಊರ್ಡಿಗೆರೆ ಹೋಬಳಿ ಸಾತಘಟ್ಟ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಳಕಿಗೆ ಬಂದಿದೆ.
ಶಾಲಾ ಆವರಣದಲ್ಲಿ ಮೊಬೈಲ್ ಟವರ್ ಅಳವಡಿಸಿದ್ದು ಇದು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.ಟವರ್ ನಿರ್ಮಿಸಿರು ವುದಕ್ಕೆ ವಿದ್ಯಾರ್ಥಿಗಳು,ಪೋಷಕರು, ಸಾರ್ವಜ ನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.ತಕ್ಷಣ ತೆರವು ಮಾಡಬೇಕು.ಇದಕ್ಕೆ ಕಾರಣರಾದ, ನಿರ್ಮಾಣಕ್ಕೆ ಅನುಮತಿ ನೀಡಿದ ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.
ಸಾತಘಟ್ಟದಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಕನ್ನಡ ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ ಇರುವ ಮೈದಾನ ದಲ್ಲಿ ಟವರ್ ನಿರ್ಮಿಸಲಾಗಿದೆ.ಸುಮಾರು 100ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಮೊಬೈಲ್ ಟವರ್ ಮಕ್ಕಳ ಆರೋಗ್ಯ ತಿನ್ನುತ್ತಿದೆ. ಟವರ್ ಹೊರಸೂಸುವ ವಿಕಿರಣವು ಮಕ್ಕಳ ಜತೆಗೆ ಶಾಲೆಯ ಸುತ್ತಮುತ್ತಲಿನ ನಿವಾಸಿಗಳ ನೆಮ್ಮದಿ ಹಾಳು ಮಾಡುತ್ತಿದೆ ಎಂದು ಪೋಷಕರು ದೂರಿದ್ದಾರೆ.
ಜನ ವಸತಿ ಪ್ರದೇಶದಲ್ಲಿ ಟವರ್ ಅಳವಡಿಸಬಾ ರದು ಎಂದು ಗೊತ್ತಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಟವರ್ ತೆರವಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾರೊಬ್ಬರೂ ಕಿವಿಗೆ ಹಾಕಿಕೊಂಡಿಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶಾಲೆಯ ಮುಖ್ಯ ಶಿಕ್ಷಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಮಕ್ಕಳ ಆರೋಗ್ಯ ರಕ್ಷಿಸಬೇಕಾದ ಅಧಿಕಾರಿಗಳೇ ಶಾಲಾ ಆವರಣದಲ್ಲಿ ಟವರ್ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ. ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತಿದ್ದಾರೆ. ಈ ಬಗ್ಗೆ ಪೋಷಕರು ಧ್ವನಿ ಎತ್ತದಂತೆ ಒತ್ತಡ ತರುತ್ತಿದ್ದಾರೆ. ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮದ ತಿಮ್ಮಯ್ಯ,ನಂಜಯ್ಯ, ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಟವರ್ ನಿರ್ಮಿಸಿರುವುದನ್ನು ವಿರೋಧಿಸಿ ಗ್ರಾಮಸ್ಥರು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಅ. 10ರಂದು ಬೆಂಗಳೂರಿನ ಆಯೋಗದ ಕಚೇರಿಯಲ್ಲಿ ಈ ದೂರಿನ ವಿಚಾರಣೆ ನಡೆಯಲಿದೆ.
ಸುದ್ದಿ ಸಂತೆ ನ್ಯೂಸ್ ತುಮಕೂರು…..