ಕವಿತಾಳ –
ಮಧ್ಯಾಹ್ನ ಬಿಸಿಯೂಟ ಸೇವಿಸಿ 55 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಮಸ್ಕಿ ತಾಲ್ಲೂಕಿನ ಅಮೀನಗಡ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನ ಉಪ್ಪಿಟ್ಟು ಸೇವಿಸಿದ 1 ರಿಂದ 7ನೇ ತರಗತಿಯ ಮಕ್ಕಳಲ್ಲಿ ಹೊಟ್ಟೆನೋವು ವಾಂತಿ, ಬೇಧಿ ಕಾಣಿಸಿಕೊಂಡಿದ್ದು ಕೆಲವು ಮಕ್ಕಳು ತಲೆ ಸುತ್ತು ಬಂದು ಬಿದ್ದಿದ್ದಾರೆ.
ವಿದ್ಯಾರ್ಥಿಗಳನ್ನು ಕವಿತಾಳದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಉಪ್ಪಿಟ್ಟು ಸರಿಯಾಗಿ ಬೆಂದಿರಲಿಲ್ಲ ಅದನ್ನು ಸೇವಿಸಿದ ನಂತರ ಹೊಟ್ಟೆ ನೋವು ಕಾಣಿಸಿಕೊಂಡು ಗಾಬರಿಯಾಯಿತು ಎಂದು ವಿದ್ಯಾರ್ಥಿಗಳು ಹೇಳಿದರು.ಈಗಾಗಲೇ 55 ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಿ ಸೂಕ್ತ ಚಿಕಿತ್ಸೆ ನೀಡಲಾಗಿದೆ.ಬಿಸಿಯೂಟದ ಅಕ್ಕಿಯಲ್ಲಿ ಹುಳು,ಮತ್ತು ಜೇಡ ಕಸ ಕಡ್ಡಿ ಇರುತ್ತವೆ.ಸ್ವಚ್ಛತೆ ಇರುವುದಿಲ್ಲ ಕುಡಿಯುವ ನೀರಿನ ತೊಟ್ಟಿಯನ್ನು ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ನಿತ್ಯದಂತೆ ಆಹಾರ ತಯಾರಿಸಲಾಗಿದೆ.ಕೆಲವು ಮಕ್ಕಳು ಉಪ್ಪಿಟ್ಟು ಸರಿಯಾಗಿ ಬೆಂದಿಲ್ಲ ಎಂದು ಹೇಳಿ ಊಟಕ್ಕೆ ಮನೆಗೆ ಹೋಗುವುದಾಗಿ ಹೇಳಿದರು.ಅಷ್ಟರಲ್ಲಿ ಕೆಲವು ಮಕ್ಕಳಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿದೆ ಎಂದು ಮುಖ್ಯ ಶಿಕ್ಷಕ ಸಿದ್ದಬಸಯ್ಯ ಹೇಳಿದರು.ಶಾಸಕ ಆರ್. ಬಸನಗೌಡ ತುರ್ವಿಹಾಳ ಹಾಗೂ ಡಿಎಚ್‌ಒ ಡಾಸುರೇಂದ್ರ ಬಾಬು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.