ಬೆಂಗಳೂರು -
ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಬೆನ್ನಲ್ಲೇ ಭಾರತ ಚುನಾವಣಾ ಆಯೋಗ (ECI) ಮಹತ್ವದ ಹೆಜ್ಜೆಯಿಟ್ಟಿದೆ. ಪರಿಷ್ಕರಣೆ ನಂತರ ಹೊರಬೀಳುವ ಅಂತಿಮ ಮತದಾರರ ಪಟ್ಟಿಯ ಆಧಾರದ ಮೇಲೆ ಪ್ರತಿಯೊಬ್ಬ ಅರ್ಹ ನಾಗರಿಕನ ಹೆಸರು ಸೇರ್ಪಡೆಯನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಸೇರಿದಂತೆ ಸಂಬಂಧಪಟ್ಟ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ (CEO) ಬೃಹತ್ ಮಟ್ಟದ 'ವಿಶೇಷ ಮತದಾರರ ನೋಂದಣಿಅಭಿಯಾನ' ನಡೆಸಲು ಇಸಿಐ ಸ್ಪಷ್ಟ ಆದೇಶ ಹೊರಡಿಸಿದೆ.
ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಪ್ರಸ್ತುತ ಹಂತಗಳು ಪೂರ್ಣಗೊಂಡ ನಂತರ ಅಕ್ಟೋಬರ್ 27 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದ್ದು, ತಕ್ಷಣವೇ ಈ ಹೊಸ ನೋಂದಣಿ ಆಂದೋಲನ ರಾಜ್ಯಾದ್ಯಂತ ಚಾಲನೆಗೊಳ್ಳಲಿದೆ.ರಾಜಕೀಯ ಗದ್ದಲದ ಬೆನ್ನಲ್ಲೇ ಚುನಾವಣಾ ಆಯೋಗವು ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ಅನುಮಾನಗಳನ್ನು ನಿವಾರಿಸಲು ವಿವರವಾದ ಪ್ರಶ್ನೋತ್ತರ ಜ್ಞಾಪನ ಪತ್ರವನ್ನು ಬಿಡುಗಡೆ ಮಾಡಿದೆ.
ಈ ನೂತನ ಅಭಿಯಾನದಡಿ ಬೂತ್ ಮಟ್ಟದ ಅಧಿಕಾರಿ ಗಳು (BLO) ಪ್ರತಿಯೊಂದು ಮನೆಗೆ ಖುದ್ದಾಗಿ ಭೇಟಿ ನೀಡಲಿದ್ದಾರೆ. ಹೊಸದಾಗಿ ಹೆಸರು ಸೇರಿಸಲು 'ಫಾರ್ಮ್-6', ಅನರ್ಹ ಹೆಸರುಗಳನ್ನು ಅಳಿಸಲು 'ಫಾರ್ಮ್-7' ಹಾಗೂ ತಿದ್ದುಪಡಿಗಳಿಗಾಗಿ 'ಫಾರ್ಮ್-8' ಅರ್ಜಿಗಳನ್ನು ವಿತರಿಸಿ ಭರ್ತಿ ಮಾಡಿಸಿಕೊಳ್ಳಲಾಗುತ್ತದೆ ನಾಗರಿಕರಿಗೆ ಆನ್‌ಲೈನ್ ಮೂಲಕವೂ ಡಿಜಿಟಲ್ ಅರ್ಜಿ ಸಲ್ಲಿಸುವ ಸುಲಭ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿಯೊಬ್ಬ ಬಿಎಲ್‌ಒ ವಾರಕ್ಕೆ ಕನಿಷ್ಠ 20 ರಿಂದ 25 ಮನೆಗಳನ್ನು ಕಡ್ಡಾಯವಾಗಿ ತಲುಪಿ, ಒಂದು ತಿಂಗಳ ಅವಧಿಯಲ್ಲಿ ಪರಿಶೀಲನೆ ಸಂಪೂರ್ಣಗೊಳಿಸಬೇಕಿದೆ.
18 ವರ್ಷ ತುಂಬುತ್ತಿರುವ ನೂತನ ಯುವ ಮತ ದಾರರನ್ನು ಗುರುತಿಸಿ ನೋಂದಾಯಿಸುವುದು ಈ ಆಂದೋಲನದ ಪ್ರಮುಖ ಆದ್ಯತೆಯಾಗಿದೆ.ಪರಿಶೀಲನೆ ಮುಗಿದ ನಂತರ ಬಿಎಲ್‌ಒಗಳು ತಯಾರಿಸುವ ಪಟ್ಟಿ ಯನ್ನು ವಿವಿಧ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳೊಂದಿಗೆ (BLA) ಹಂಚಿಕೊಳ್ಳಲಾಗುತ್ತದೆ.
ತದನಂತರವೇ ಈ ಅರ್ಜಿಗಳನ್ನು ಮತದಾರರ ನೋಂದಣಿ ಅಧಿಕಾರಿಗಳು (ERO) ಸ್ಥಳ ತನಿಖೆಗೆ ಒಳಪಡಿಸಿ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳು ತ್ತಾರೆ. ಯಾವುದೇ ವ್ಯಕ್ತಿ ನಕಲಿ ಮಾಹಿತಿ ನೀಡಿದರೆ ಅಥವಾ ದುರುದ್ದೇಶಪೂರ್ವಕವಾಗಿ ಬೇರೆ ಹೆಸರು ಗಳನ್ನು ಅಳಿಸಲು ಅರ್ಜಿ ಸಲ್ಲಿಸಿದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಜಿಲ್ಲಾ ಚುನಾವಣಾ ಧಿಕಾರಿಗಳಿಗೆ (DEO) ಸಂಪೂರ್ಣ ಅಧಿಕಾರ ನೀಡಲಾಗಿದೆ
ಇದರ ಜೊತೆಗೆ ನಿರಾಶ್ರಿತರು, ನೈಟ್ ಶೆಲ್ಟರ್‌ಗಳಲ್ಲಿ ವಾಸಿಸುವವರು ಮತ್ತು ಕಾರ್ಮಿಕ ಕಾಲೋನಿಗಳ ನಿವಾಸಿಗಳಿಗಾಗಿ ವಿಶೇಷ ಬೂತ್‌ಗಳನ್ನು ನಿರ್ಮಿಸಿ ನೋಂದಣಿಗೆ ನೆರವಾಗಲು ಆಯೋಗ ಸೂಚಿಸಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....