ಕೊಪ್ಪಳ -
ಕುಷ್ಟಗಿ ಬಿಇಒ ಕಚೇರಿ ಯಲ್ಲಿ ನಡೆದ 70 ಲಕ್ಷ ರೂಪಾಯಿ ಅವ್ಯವಹಾರ ಪ್ರಕರಣ ಕುರಿತು ತನಿಖೆ ತೀವ್ರಗೊಂಡಿದ್ದು ಇಲ್ಲಿ ಹಣ ದುರ್ಬಳಕೆ ಹೇಗೆ ಆಯಿತು ಎಂಬೊದನ್ನು ನೋಡೊದಾದರೆ ನಿವೃತ್ತ ನೌಕರರ ಗಳಿಕೆ ರಜೆ ನಗದೀಕರಣ ಬಿಲ್, ಅತಿಥಿ ಶಿಕ್ಷಕರ ಗೌರವಧನ ಬಿಲ್, ಅಂತಿಮ ಸಂದಾಯ ಬಿಲ್ (ಜಿಪಿಎಫ್) ಹಾಗೂ ತುಟ್ಟಿಭತ್ಯೆ ಬಾಕಿ ಬಿಲ್ಗಳ ಮೂಲಕ ಸರ್ಕಾರದ ಲಕ್ಷಾಂತರ ಹಣವನ್ನು ನೌಕರ ತನ್ನದೂ ಸೇರಿದಂತೆ ಇತರೆ ಖಾಸಗಿ ವ್ಯಕ್ತಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿರುವುದನ್ನು ಲೆಕ್ಕಪರಿಶೋಧಕರು ಪತ್ತೆಹಚ್ಚಿದ್ದಾರೆ.
ನಿಯಮಗಳ ಪ್ರಕಾರ ಕಚೇರಿಯ ಯಾವುದೇ ಒಂದು ಬಿಲ್ ಪಾವತಿ ಮಾಡಬೇಕಾದರೆ ಕಾರ್ಯನಿರ್ವಾಹಕ, ಅಧೀಕ್ಷಕ, ವ್ಯವಸ್ಥಾಪಕ ಹಾಗೂ ಬಿಇಒ ಅವರ ಟಿಪ್ಪಣಿಯೊಂದಿಗೆ ಖುದ್ದಾಗಿ (ಮ್ಯಾನುವೆಲ್) ಉಪ ಖಜಾನೆಗೆ ಸಲ್ಲಿಕೆಯಾಗಬೇಕಿರುವುದು ಕಡ್ಡಾಯ. ಆದರೆ ಕನಕನಗೌಡ ಯಾವುದೇ ಕಡತಗಳನ್ನು ಕಚೇರಿಯಲ್ಲಿ ಸಿಬ್ಬಂದಿ ಹಾಗೂ ಬಿಇಒ ಅವರ ಬಳಿ ಮಂಡಿಸದೇ ಕಾನೂನು ಬಾಹಿರವಾಗಿ ಉಪ ಖಜಾನೆಗೆ ಬಿಲ್ ಕಳಿಸಿ ಪಾಸ್ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಉಪ ಖಜಾನೆಯಿಂದ ಪಾವತಿಯಾಗಿರುವ ಬಿಲ್ಗಳ ಪ್ರಕಾರ ಕನಕನಗೌಡ ಕೆಜಿ ಬ್ಯಾಂಕ್ನ ತನ್ನ ಖಾತೆಗೆ ₹7.63 ಲಕ್ಷ ಜಮೆ ಮಾಡಿಸಿಕೊಂಡಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಕಚೇರಿ, ಇಲಾಖೆಗೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಗಳಾದ ಶಿವರುದ್ರಪ್ಪ ಬಂಡಿ (ಮುತ್ತಣ್ಣ) ಅವರ ಎಕ್ಸಿಸ್ ಬ್ಯಾಂಕ್ ಖಾತೆಗೆ ₹26.75 ಲಕ್ಷ, ಎಸ್ಬಿಐ ಖಾತೆಗೆ ₹14.66 ಲಕ್ಷ, ಪೂಜಾ ಬಂಡಿ ಎಂಬುವವರ ಹೆಸರಿನಲ್ಲಿರುವ ಕರ್ನಾಟಕ ಬ್ಯಾಂಕ್ ಖಾತೆಗೆ ₹90 ಸಾವಿರ. ಬಸಮ್ಮ ಅಮರೇಶ ಬಂಡಿ ಎಂಬುವವರ ಕೆನರಾ ಬ್ಯಾಂಕ್ ಖಾತೆಗೆ ₹ 8.11 ಲಕ್ಷ ಹಾಗೂ ಎಕ್ಸಿಸ್ ಬ್ಯಾಂಕಿನಲ್ಲಿ ಬಸಮ್ಮ ಬಂಡಿ ಅವರ ಖಾತೆಗೆ ₹10.85 ಲಕ್ಷ ಸೇರಿ ಒಟ್ಟು ₹70 ಲಕ್ಷ ಸರ್ಕಾರದ ಹಣವನ್ನು ಬೇರೆ ಬೇರೆ ಖಾತೆಗಳಿಗೆ ಜಮೆ ಮಾಡಿಸುವ ಮೂಲಕ ಸರ್ಕಾರಕ್ಕೆ ಮೋಸ ಮಾಡಿದ್ದು ಕಾನೂನು ಕ್ರಮ ಜರುಗಿಸುವಂತೆ ಬಿಇಒ ದೂರಿನಲ್ಲಿ ತಿಳಿಸಿದ್ದಾರೆ.
ಶಿಕ್ಷಣಾಧಿಕಾರಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ.
ಸುದ್ದಿ ಸಂತೆ ನ್ಯೂಸ್ ಕುಷ್ಟಗಿ.....