ಬೆಂಗಳೂರು -
15 ಜಿಲ್ಲೆಗಳ ಡಿಡಿಪಿಐ, ಬಿಇಒಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಾದ ಘಟನೆ ಬೆಂಗಳೂರಿ ನಲ್ಲಿ ನಡೆದಿದೆ ಹೌದು ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ 2026-27ನೇ ಸಾಲಿನಲ್ಲಿ ವಿತರಿಸಲಾಗು ತ್ತಿರುವ ಶೂಗಳ ಗುಣಮಟ್ಟದ ಬಗ್ಗೆ ಕೇಳಿಬಂದಿರುವ ಗಂಭೀರ ಆರೋಪಗಳು ಇದೀಗ ಲೋಕಾಯುಕ್ತರ ತನಿಖೆಯ ವ್ಯಾಪ್ತಿಗೆ ಬಂದಿವೆ.ಶಾಲಾ ಮಕ್ಕಳಿಗೆ ವಿತರಿ ಸಲಾದ ಶೂಗಳು ಕೆಲವೇ ದಿನಗಳಲ್ಲಿ ಹರಿದು ಹೋಗುತ್ತಿವೆ,ಹೊಲಿಗೆಗಳು ಬಿಚ್ಚಿಕೊಳ್ಳುತ್ತಿವೆ ಹಾಗೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗುಣಮಟ್ಟ ತೀವ್ರವಾಗಿ ಕುಸಿದಿದೆ ಎಂಬ ಮಾಧ್ಯಮ ವರದಿಗಳನ್ನು ಆಧರಿಸಿ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಪ್ರಾಥಮಿಕ ತನಿಖೆಯ ಭಾಗವಾಗಿ 15 ಜಿಲ್ಲೆಗಳ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇ ಶಕರು (ಡಿಡಿಪಿಐ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಒ) ವಿರುದ್ಧ ಪ್ರತ್ಯೇಕ ದೂರುಗಳನ್ನು ದಾಖಲಿ ಸಲಾಗಿದೆ. ಸಂಬಂಧಪಟ್ಟ ಜಿಲ್ಲೆಗಳ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತನಿಖೆ ನಡೆಸಿ ಎರಡು ವಾರಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ತನಿಖೆಯ ವ್ಯಾಪ್ತಿಗೆ ಗದಗ, ಯಾದಗಿರಿ, ಮೈಸೂರು, ಬೆಂಗಳೂರು ದಕ್ಷಿಣ (ರಾಮನಗರ), ಕೊಡಗು, ಬೆಂಗಳೂರು ನಗರ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಚಾಮರಾಜನಗರ, ಚಿತ್ರದುರ್ಗ, ಚಿಕ್ಕಮಗಳೂರು, ವಿಜಯಪುರ ಮತ್ತು ಧಾರವಾಡ ಜಿಲ್ಲೆಗಳು ಸೇರಿವೆ ಎಂದು ವರದಿಯಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ವಿತರಿಸಲಾದ ಶೂಗಳು ಬಳಕೆಗೆ ಯೋಗ್ಯವಾಗಿಲ್ಲ ಎಂಬ ದೂರು ಗಳು ಹಲವು ಕಡೆಗಳಿಂದ ಕೇಳಿಬಂದಿವೆ. ಕೆಲವು ವರದಿಗಳ ಪ್ರಕಾರ, ಹೊಸ ಶೂಗಳನ್ನು ಧರಿಸಿದ ಕೆಲವೇ ದಿನಗಳಲ್ಲಿ ಅವು ಹರಿದು ಹೋಗಿರುವುದು ಹಾಗೂ ಕೆಲವು ಸಂದರ್ಭಗಳಲ್ಲಿ ಅಲ್ಪಾವಧಿಯ ಬಳಕೆಯಲ್ಲೇ ಹೊಲಿಗೆಗಳು ಬಿಚ್ಚಿಕೊಂಡಿರುವ ಆರೋಪಗಳು ಕೇಳಿಬಂದಿವೆ.
ಈ ಬೆಳವಣಿಗೆ ಕೇವಲ ಉತ್ಪನ್ನದ ಗುಣಮಟ್ಟದ ಪ್ರಶ್ನೆಯಲ್ಲ. ಸಾರ್ವಜನಿಕ ಹಣದಲ್ಲಿ ಖರೀದಿಸಿದ ವಸ್ತು ಮಕ್ಕಳಿಗೆ ವಿತರಿಸುವ ಮೊದಲು ಅದರ ಗುಣ ಮಟ್ಟವನ್ನು ಯಾರು ಪರಿಶೀಲಿಸಿದರು ನಿಗದಿತ ಮಾನದಂಡಗಳನ್ನು ಪೂರೈಸದಿದ್ದರೆ ಅದನ್ನು ಸ್ವೀಕರಿಸಿದವರು ಯಾರು ಸರಬರಾಜುದಾರನ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಯಿತು ಎಂಬ ಪ್ರಶ್ನೆಗಳು ಈಗ ಪ್ರಮುಖವಾಗಿವೆ.
ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಶೂ ಮತ್ತು ಸಾಕ್ಸ್ ನೀಡುವ ಯೋಜನೆ ಹೊಸದಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2015-16ನೇ ಶೈಕ್ಷಣಿಕ ಸಾಲಿನಲ್ಲಿ 1ರಿಂದ 10ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಶೂ ಮತ್ತು ಸಾಕ್ಸ್ ವಿತರಿಸುವ ಯೋಜನೆ ಆರಂಭಿಸಿತ್ತು.
ಯೋಜನೆಯ ಆರಂಭಿಕ ಹಂತದಲ್ಲೇ ವಿತರಣೆ ವಿಳಂಬ ಹಾಗೂ ಗುಣಮಟ್ಟದ ಬಗ್ಗೆ ಆಕ್ಷೇಪಗಳು ಕೇಳಿಬಂದಿದ್ದವು. 2017ರಲ್ಲಿ ಸರ್ಕಾರವು ಕಳಪೆ ಶೂಗಳ ದೂರುಗಳ ಹಿನ್ನೆಲೆಯಲ್ಲಿ ಒಂದು ವರ್ಷದ ಖಾತರಿಯುಳ್ಳ ಶೂಗಳನ್ನು ನೀಡುವ ಬಗ್ಗೆ ಚಿಂತನೆ ನಡೆಸಿದ್ದ ವರದಿಗಳೂ ಪ್ರಕಟವಾಗಿದ್ದವು.
ಶೂಗಳ ಗುಣಮಟ್ಟ ಮತ್ತು ಸಮಯಕ್ಕೆ ಸರಿಯಾಗಿ ವಿತರಣೆ ಎಂಬ ಎರಡು ಸಮಸ್ಯೆಗಳು ಈ ಯೋಜನೆ ಯನ್ನು ಹಲವು ವರ್ಷಗಳಿಂದ ಕಾಡುತ್ತಿವೆ ಎಂಬುದು ಹಿಂದಿನ ಘಟನೆಗಳಿಂದಲೂ ಸ್ಪಷ್ಟವಾಗುತ್ತದೆ.2024-25ನೇ ಸಾಲಿನಲ್ಲಿಯೂ ಶಾಲೆಗಳು ಆರಂಭವಾದರೂ ಅನೇಕ ಸರ್ಕಾರಿ ಶಾಲೆಗಳ ಮಕ್ಕಳಿಗೆ ಶೂ ಮತ್ತು ಸಾಕ್ಸ್ ತಲುಪಿರಲಿಲ್ಲ. ಹಣ ಬಿಡುಗಡೆಯಾಗದ ಕಾರಣ ಸ್ಥಳೀಯವಾಗಿ ಖರೀದಿ ಮಾಡಲು ಸಾಧ್ಯ ವಾಗುತ್ತಿಲ್ಲ ಎಂಬ ದೂರುಗಳು ಆಗ ಕೇಳಿಬಂದಿದ್ದವು. ಆ ಸಂದರ್ಭದಲ್ಲಿ 1ರಿಂದ 5ನೇ ತರಗತಿಗೆ ₹265, 6ರಿಂದ 8ನೇ ತರಗತಿಗೆ ₹295 ಹಾಗೂ 9 ಮತ್ತು 10ನೇ ತರಗತಿಗೆ ₹325ರಂತೆ ಮೊತ್ತ ನಿಗದಿಪಡಿ ಸಲಾಗಿತ್ತು ಎಂದು ವರದಿಯಾಗಿತ್ತು.
ಇದರಿಂದ ಯೋಜನೆಯ ಮತ್ತೊಂದು ಮೂಲಭೂತ ಸಮಸ್ಯೆ ಬೆಳಕಿಗೆ ಬಂದಿತ್ತು-ನಿಗದಿಪಡಿಸಿದ ಅನುದಾ ನದಲ್ಲಿ ಸರ್ಕಾರ ನಿರೀಕ್ಷಿಸುವ ಗುಣಮಟ್ಟದ ಶೂ ಮತ್ತು ಸಾಕ್ಸ್‌ಗಳನ್ನು ಖರೀದಿಸಲು ಸಾಧ್ಯವೇ? ಎಂಬ ಪ್ರಶ್ನೆ ಕಾಡುತ್ತಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು......