ತುಮಕೂರು -
ಶಿಕ್ಷಣವೆಂದರೆ ಕೇವಲ ಪಾಠ ಬೋಧನೆಯಲ್ಲ, ವಿದ್ಯಾರ್ಥಿಯ ಭವಿಷ್ಯ ರೂಪಿಸುವ ಮಹತ್ತರ ಜವಾಬ್ದಾರಿ ಎಂಬುದನ್ನು ಬದುಕಿನಲ್ಲಿ ತೋರಿಸಿದ ಆದರ್ಶ ಶಿಕ್ಷಕಿ ಇಂದಿರಾದೇವಿ. ತುಮಕೂರು ತಾಲೂಕು ಭ್ರಹ್ಮಸಂದ್ರ ರು.ಶಿ.ಮ.ತಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಇಂದಿರಾದೇವಿ ಜಿಲ್ಲಾ ಮಟ್ಟದ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ಒಲಿದಿದೆ.
ಒಬ್ಬ ಶಿಕ್ಷಕಿಯ ನಿಜವಾದ ಸಾಧನೆ ಕೇವಲ ಪರೀಕ್ಷಾ ಫಲಿತಾಂಶಗಳಲ್ಲ ವಿದ್ಯಾರ್ಥಿಗಳಲ್ಲಿ ಜ್ಞಾನ, ಆತ್ಮ ವಿಶ್ವಾಸ, ವೈಜ್ಞಾನಿಕ ಮನೋಭಾವ ಮತ್ತು ಬದುಕಿನ ಮೌಲ್ಯಗಳನ್ನು ಬೆಳೆಸುವುದರ ಜೊತೆಗೆ ಕಾರ್ಯ ನಿರ್ವಹಿಸುವ ಶಾಲೆಯನ್ನೂ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವುದು ಹೇಗೆಂಬುದನ್ನು ಇಂದಿರಾದೇವಿ ಸಾಧಿಸಿ ತೋರಿಸಿದ್ದಾರೆ.
ಗಣಿತ ಮತ್ತು ಭೌತಶಾಸ್ತ್ರ ಶಿಕ್ಷಕಿಯಾಗಿ 18ಕ್ಕೂ ವರ್ಷಗಳ ಬೋಧನಾ ಅನುಭವ ಹೊಂದಿರುವ ಅವರು, ಮುಖ್ಯಶಿಕ್ಷಕಿಯಾಗಿ ಆಡಳಿತದ ಜವಾಬ್ದಾರಿ ಯನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಕಲಿಕೆಯನ್ನು ಸರಳ, ಪ್ರಾಯೋಗಿಕ ಹಾಗೂ ಜೀವನಾಧಾರಿತವಾಗಿಸುವುದು ಅವರ ಬೋಧನಾ ಶೈಲಿಯ ಪ್ರಮುಖ ವೈಶಿಷ್ಟ್ಯವಾಗಿದೆ.
ಗಣಿತ ಮತ್ತು ಭೌತಶಾಸ್ತ್ರ ವಿಷಯಗಳಲ್ಲಿ 8, 9 ಮತ್ತು 10ನೇ ತರಗತಿಗಳಿಗೆ ಬೋಧನೆ ಮಾಡಿರುವ ಇಂದಿರಾ ದೇವಿ ಹಲವು ವರ್ಷಗಳ ಕಾಲ ಉತ್ತಮ ಶೈಕ್ಷಣಿಕ ಫಲಿತಾಂಶ ಕಾಯ್ದುಕೊಂಡಿದ್ದಾರೆ. ಒಂದು ವರ್ಷದ ಆಕಸ್ಮಿಕ ಸಾಧನೆಯಲ್ಲ; ನಿರಂತರ ಪರಿಶ್ರಮ, ವಿದ್ಯಾರ್ಥಿಗಳ ವೈಯಕ್ತಿಕ ಸಾಮರ್ಥ್ಯದ ಗುರುತಿ ಸುವಿಕೆ ಮತ್ತು ಸೂಕ್ತ ಬೋಧನಾ ವಿಧಾನಗಳ ಫಲ ವಾಗಿದೆ.
M.Sc. ಗಣಿತದಂತಹ ಹೆಚ್ಚುವರಿ ಶೈಕ್ಷಣಿಕ ಅರ್ಹ ತೆಯನ್ನು ಬೋಧನಾ ಕಾರ್ಯದಲ್ಲಿ ಪರಿಣಾಮಕಾ ರಿಯಾಗಿ ಬಳಸಿಕೊಂಡಿರುವ ಅವರು, ಕಠಿಣ ಗಣಿತ ಪರಿಕಲ್ಪನೆಗಳನ್ನು ಸರಳವಾಗಿ ಅರ್ಥೈಸುವಂತೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಗಣಿತದ ಮೇಲಿನ ಆಸಕ್ತಿ, ಆತ್ಮ ವಿಶ್ವಾಸ ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಬೆಳೆಸಲು ನೆರವಾಗಿದೆ.
ಇಂದಿನ ತಲೆಮಾರಿನ ವಿದ್ಯಾರ್ಥಿಗಳಿಗೆ ಕೇವಲ ಪಠ್ಯಪುಸ್ತಕದ ಜ್ಞಾನ ಸಾಕಾಗುವುದಿಲ್ಲ ಎಂಬುದನ್ನು ಅರಿತಿರುವ ಇಂದಿರಾದೇವಿ ಅವರು, ಗಣಿತ ಮಾದರಿ ತಯಾರಿಕೆ, ಗಣಿತ-ವಿಜ್ಞಾನ ವಸ್ತುಪ್ರದರ್ಶನ, ಇನ್‌ಸ್ಪೈರ್ ಅವಾರ್ಡ್ ಮಾದರಿ ತಯಾರಿ, ಐ.ಟಿ. ಕ್ವಿಜ್, ವಿಜ್ಞಾನ ಚರ್ಚೆ ಮತ್ತು ರಸಪ್ರಶ್ನೆ ಮೊದಲಾದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿದ್ದಾರೆ.
ಪ್ರೊಜೆಕ್ಟರ್, ಸ್ಮಾರ್ಟ್ ಟಿ.ವಿ. ಸೇರಿದಂತೆ ತಂತ್ರಜ್ಞಾನ ಆಧಾರಿತ ಬೋಧನಾ ವಿಧಾನಗಳನ್ನು ಬಳಸುವ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಪ್ರಯತ್ನಿಸಿದ್ದಾರೆ. ಮೂಢನಂಬಿಕೆಗಳನ್ನು ದೂರ ಮಾಡಿ ವೈಜ್ಞಾನಿಕವಾಗಿ ಯೋಚಿಸುವ ಮನೋಭಾವ ಬೆಳೆಸುವುದಕ್ಕೂ ಆದ್ಯತೆ ನೀಡಿದ್ದಾರೆ.
ಇಂದಿರಾದೇವಿಯವರ ಸೇವೆಯ ಮತ್ತೊಂದು ಗಮನಾರ್ಹ ಅಂಶವೆಂದರೆ ಶಾಲಾ ದಾಖಲಾತಿ ಹೆಚ್ಚಿಸುವುದು ಮತ್ತು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವುದನ್ನು ತಡೆಯಲು ಕೈಗೊಂಡ ಕ್ರಮಗಳು.
ಸ್ವಂತ ಹಣದಿಂದ ಶಾಲಾ ವಾಹನದ ವ್ಯವಸ್ಥೆ, ಪೋಷಕರ ಸಭೆ, ನಿರಂತರ ಪೋಷಕ ಸಂಪರ್ಕ, ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ, ವೈಯಕ್ತಿಕ ಆಪ್ತ ಸಮಾಲೋಚನೆ ಹಾಗೂ ಉಚಿತ ನೋಟ್ ಪುಸ್ತಕ ಮತ್ತು ಸಮವಸ್ತ್ರ ವಿತರಣೆ ಮುಂತಾದ ಕ್ರಮಗಳ ಮೂಲಕ ಶಿಕ್ಷಣದಿಂದ ಯಾವುದೇ ಮಗು ವಂಚಿತ ವಾಗಬಾರದು ಎಂಬ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.
ಮುಖ್ಯಶಿಕ್ಷಕಿಯಾಗಿ ಅಧಿಕಾರದ ಸ್ಥಾನದಲ್ಲಿ ಕುಳಿತು ಆಡಳಿತ ನಡೆಸುವುದಕ್ಕಿಂತ, ತಾವೇ ಮುಂದೆ ನಿಂತು ಕೆಲಸ ಮಾಡುವ ನಾಯಕತ್ವದ ಮಾದರಿಯನ್ನು ಇಂದಿರಾದೇವಿಯವರು ಅನುಸರಿಸಿದ್ದಾರೆ.
ದಾನಿಗಳು ಮತ್ತು ಸಮುದಾಯದ ಸಹಕಾರ ದೊಂದಿಗೆ ಶಾಲೆಯ ಭೌತಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಶಾಲಾ ಆವರಣದಲ್ಲಿ ಸುಮಾರು ₹10 ಲಕ್ಷ ಅಂದಾಜು ವೆಚ್ಚದಲ್ಲಿ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಸಭಾಂಗಣ ನಿರ್ಮಾಣಕ್ಕೆ ಮುಂದಾಗಿರುವುದು, ಶಾಲಾ ಮುಖ್ಯದ್ವಾರ, ಕಾಂಕ್ರೀಟ್ ರಸ್ತೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಪ್ರಯತ್ನಗಳು ಅವರ ಅಭಿವೃದ್ಧಿಪರ ದೃಷ್ಟಿಕೋನಕ್ಕೆ ಸಾಕ್ಷಿಯಾಗಿವೆ.
ದೂರದ ಹಳ್ಳಿಗಳಿಂದ ಶಾಲೆಗೆ ಬರುವ ಮಕ್ಕಳಿಗೆ ಅನುಕೂಲ ವಾಗುವಂತೆ ಸ್ಕೂಲ್ ವ್ಯಾನ್ ವ್ಯವಸ್ಥೆ ಮಾಡಿ ದಾಖಲಾತಿ ಹೆಚ್ಚಳಕ್ಕೆ ಕಾರಣರಾಗಿರುತ್ತಾರೆ,
ವಿದ್ಯಾರ್ಥಿಗಳ ಸುರಕ್ಷತೆಗೆ CCTV ಕ್ಯಾಮೆರಾಗಳ ಅಳವಡಿಕೆ, ಸ್ಮಾರ್ಟ್ ಟಿ.ವಿ., ಕಂಪ್ಯೂಟರ್-ಪ್ರಿಂಟರ್, UPS ಸೇರಿದಂತೆ ಅಗತ್ಯ ಸೌಲಭ್ಯಗಳ ಅಭಿವೃದ್ಧಿಗೂ ಅವರು ಶ್ರಮಿಸಿದ್ದಾರೆ.ವಿಶೇಷ ಅಗತ್ಯವುಳ್ಳ ಮಕ್ಕಳಾದ CWSN ವಿದ್ಯಾರ್ಥಿಗಳನ್ನೂ ಇತರ ಮಕ್ಕಳಂತೆ ಶಾಲೆಯ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿ ಸುವಂತೆ ಪ್ರೋತ್ಸಾಹಿಸಿ, ಅವರಲ್ಲಿ ಆತ್ಮವಿಶ್ವಾಸ ಮತ್ತು ಸಮಾನತೆಯ ಭಾವನೆ ಬೆಳೆಸಲು ಇಂದಿರಾ ದೇವಿಯವರು ವಿಶೇಷ ಗಮನ ನೀಡಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಿದ್ದಾರೆ.
ರಾಷ್ಟ್ರೀಯ ಹಬ್ಬಗಳು, ಏಕತಾ ನಡಿಗೆ, ಪರಿಸರ ಜಾಗೃತಿ, 'ಕಾಡು ಬೆಳೆಸಿ-ನಾಡು ಉಳಿಸಿ' ಮುಂತಾದ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಏಕತೆ, ಸಾಮಾಜಿಕ ಜವಾಬ್ದಾರಿ ಮತ್ತು ಪರಿಸರ ಪ್ರಜ್ಞೆಯನ್ನು ಬೆಳೆಸುವ ಕಾರ್ಯಕ್ಕೂ ಒತ್ತು ನೀಡಿದ್ದಾರೆ.ಇಂದಿರಾದೇವಿಯವರ ಸೇವೆಯನ್ನು ಗಮನಿಸಿದಾಗ, ಅವರ ಸಾಧನೆ ಕೇವಲ 'ಉತ್ತಮ ಫಲಿತಾಂಶ' ಎಂಬ ಒಂದೇ ಮಾನದಂಡಕ್ಕೆ ಸೀಮಿತ ವಾಗುವುದಿಲ್ಲ. ಉತ್ತಮ ಬೋಧನೆ, ತಂತ್ರಜ್ಞಾನ ಬಳಕೆ, ವಿದ್ಯಾರ್ಥಿ ಮಾರ್ಗದರ್ಶನ, ದಾಖಲಾತಿ ಹೆಚ್ಚಳ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಿಕ್ಷಣದತ್ತ ತರುವುದು,
CWSN ಮಕ್ಕಳ ಬಗ್ಗೆ ಕಾಳಜಿ, ವಿದ್ಯಾರ್ಥಿಗಳ ಸುರಕ್ಷತೆ, ಶಾಲೆಯ ಭೌತಿಕ ಅಭಿವೃದ್ಧಿ ಹಾಗೂ ಸಮುದಾಯದ ಸಹಭಾಗಿತ್ವ-ಇವೆಲ್ಲವನ್ನೂ ಸಮನ್ವಯಗೊಳಿಸಿರು ವುದು ಅವರ ಸೇವೆಯ ವಿಶೇಷತೆ ಎನ್ನಿಸಿದೆ.ಶಿಕ್ಷಕ ವೃತ್ತಿಯನ್ನು ಕೇವಲ ಉದ್ಯೋಗವಾಗಿ ಕಾಣದೆ, ವಿದ್ಯಾರ್ಥಿಯ ಬದುಕನ್ನು ರೂಪಿಸುವ ಸೇವೆ ಎಂದು ಪರಿಗಣಿಸಿದಾಗ
ಶಿಕ್ಷಣ ಕ್ಷೇತ್ರದಲ್ಲಿ ಎಂತಹ ಪರಿವರ್ತನೆ ಸಾಧ್ಯ ಎಂಬುದಕ್ಕೆ ಶ್ರೀಮತಿ ಇಂದಿರಾದೇವಿಯವರ ಕಾರ್ಯಶೈಲಿ ಒಂದು ಉತ್ತಮ ಉದಾಹರಣೆಯಾಗಿದೆ
ಅವರ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯ ಮನ್ನಣೆ, ಒಬ್ಬ ವ್ಯಕ್ತಿಯ ಸಾಧನೆಗೆ ದೊರೆತ ಗೌರವ ಮಾತ್ರವಲ್ಲ; ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ಸಮಾಜ ನೀಡುವ ಗೌರವದ ಸಂಕೇತವೂ ಹೌದು.
ಇಂತಹ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಮೂಲಕ ಶಿಕ್ಷಣ ಇಲಾಖೆಯೂ ಶಿಕ್ಷಕರಲ್ಲಿ ಹೊಸ ಉತ್ಸಾಹ, ಜವಾಬ್ದಾರಿ ಮತ್ತು ಸೃಜನಶೀಲತೆಯನ್ನು ಮೂಡಿಸುವ ಕೆಲಸ ಮಾಡುತ್ತಿದೆ. ಶಿಕ್ಷಕರ ಪರಿಶ್ರಮಕ್ಕೆ ದೊರೆಯುವ ಪ್ರತಿಯೊಂದು ಗೌರವವೂ ಮತ್ತಷ್ಟು ಉತ್ತಮ ಶಿಕ್ಷಣ ದತ್ತ ಸಮಾಜವನ್ನು ಕೊಂಡೊಯ್ಯುವ ಪ್ರೇರಣೆ ಯಾಗುತ್ತದೆ.
'
ಒಬ್ಬ ಉತ್ತಮ ಶಿಕ್ಷಕ ಒಂದು ವಿದ್ಯಾರ್ಥಿಯ ಭವಿಷ್ಯ ಬದಲಾಯಿಸಬಹುದು; ಒಬ್ಬ ಆದರ್ಶ ಶಿಕ್ಷಕ ಇಡೀ ಶಾಲೆಯ ಭವಿಷ್ಯವನ್ನೇ ಬದಲಾಯಿಸಬಹುದು.'
ಈ ಮಾತಿಗೆ ಅರ್ಥಪೂರ್ಣ ಉದಾಹರಣೆಯಾಗಿ ನಿಂತಿರುವ ಇಂದಿರಾದೇವಿ ಅವರ ಸೇವೆ, ಶಿಕ್ಷಕ ಸಮುದಾಯಕ್ಕೆ ಪ್ರೇರಣೆಯ ದಾರಿದೀಪವಾಗಿದೆ.
ಸುದ್ದಿ ಸಂತೆ ನ್ಯೂಸ್ ತುಮಕೂರು......