ಬೆಂಗಳೂರು –
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ವಿಚಾರ ಕುರಿತು ಕೊನೆಗೂ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಮಾಜಿ ಶಾಸಕ ಎಂ.ವಿ. ನಾಗರಾಜ್ ಸದಾಶಿವನಗರ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಅಪರಿಚಿತರ ವಿರುದ್ಧ ನೀಡಿರುವ ದೂರನ್ನು ಸದಾಶಿವನಗರ ಪೊಲೀಸರು ಸ್ವೀಕರಿಸಿ ದ್ದಾರೆ. ದೂರನ್ನು ಆಧರಿಸಿ ಎಫ್‌ಐಆರ್ ದಾಖಲಿಸಿದ್ದು ಈ ಮೂಲಕ ಸಿಡಿ ಸ್ಫೋಟದ ಎಸ್‌ಐಟಿ ತನಿಖೆಗೆ ಎದುರಾಗಿದ್ದ ತೊಡಕು ದೂರವಾಗಿದೆ.
ರಮೇಶ್ ಜಾರಕಿಹೊಳಿ ಬಗ್ಗೆ ಸಂಚು ರೂಪಿಸಿ ನಕಲಿ ಸಿಡಿ ತಯಾರಿಸಲಾಗಿದೆ. ಜಾರಕಿಹೊಳಿಯನ್ನು ರಾಜಕೀಯವಾಗಿ ಮುಗಿಸಲು ಈ ಷಡ್ಯಂತ್ರ ನಡೆದಿದೆ. ಇದರ ಹಿಂದೆ ಅನೇಕರ ಕೈವಾಡವಿದೆ. ಸಿಡಿ ಸ್ಫೋಟ ಕುರಿತು ಸಮಗ್ರ ತನಿಖೆ ಮಾಡಬೇಕು. ನಕಲಿ ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ಉಲ್ಲೇಖ ಮಾಡಲಾಗಿದೆ.
ನಕಲಿ ಸಿಡಿ ಎಂದು ಭಾವಿಸಿ ಮೊದಲು ದೂರು ನೀಡಿರಲಿಲ್ಲ ಎಂದು ಉಲ್ಲೇಖಿಸಿ ಅಪರಿಚಿತರ ವಿರುದ್ಧ ದೂರು ನೀಡಲಾಗಿದೆ. ಜಾರಕಿಹೊಳಿ ಪರಮಾಪ್ತ ಹಾಗೂ ಮಾಜಿ ಶಾಸಕ ನಾಗರಾಜ್ ನೀಡಿರುವ ದೂರನ್ನು ಪರಿಗಣಿಸಿ ಸದಾಶಿವನಗರ ಪೊಲೀಸರು ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಅವರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಸಿಡಿ ಸ್ಪೋಟ ಪ್ರಕರಣ ಸಂಬಂಧ ಈಗಾಗಲೇ ವಿಶೇಷ ತನಿಖಾ ತಂಡ ಆರು ಮಂದಿಯನ್ನು ವಶಕ್ಕೆ ಪಡೆದಿದೆ. ಬೀದರ್ ನ ಬಾಲ್ಕಿಯಲ್ಲಿ ಕಾನೂನು ವಿದ್ಯಾರ್ಥಿ ಸೇರಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರು ಯುವಕರು ಮಿಸ್ಸಿಂಗ್ ಆಗಿದ್ದಾರೆ ಎಂದು ಆರೋಪಿಸಿ ವಿಶೇಷ ತನಿಖಾ ತಂಡದ ವಿರುದ್ಧವೇ ಎಫ್‌ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ಬಾಲ್ಕಿಯಲ್ಲಿ ವಶಕ್ಕೆ ಪಡೆದಿದ್ದ ಇಬ್ಬರು ಯುವಕರ ನ್ನು ಕಾನೂನು ಬದ್ಧಗೊಳಿಸುವ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಇನ್ನು ಈಗಾಗಲೇ ವಶಕ್ಕೆ ಪಡೆದಿದ್ದ ಆರು ಮಂದಿಯ ಪೈಕಿ ಅಗತ್ಯ ಇರುವರನ್ನು ಬಂಧಿಸುವ ಸಾಧ್ಯತೆ ಯಿದೆ. ಅಂತೂ ವಿಶೇಷ ತನಿಖಾ ತಂಡದ ತನಿಖೆಗೆ ಅಡ್ಡಿಯಾಗಿದ್ದ ತೊಡಕು ದೂರವಾಗಿದೆ.ಒಂದು ಕಡೆ ಕೊನೆಗೂ ದೂರು ದಾಖಲಾದರೆ ಮತ್ತೊಂದು ಕಡೆ ತನಿಖೆ ತೀವ್ರಗೊಂಡಿದ್ದು ಇನ್ನೂ ಏನೇನೂ ಬೆಳವಣಿಗೆ ಆಗುತ್ತದೆ ಕಾದು ನೋಡಬೇಕು.