ಬೆಂಗಳೂರು –
ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ, ದೈಹಿಕ ಶಿಕ್ಷಣ ಶಿಕ್ಷಕ ವೆಂಕಟೇಶ್ ಎಂಬಾತನನ್ನು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.’ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ವೆಂಕಟೇಶ್ ಬಂಧಿತನಾಗಿದ್ದಾನೆ. ಕೊರಟಗೆರೆ ತಾಲ್ಲೂಕಿನ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಪ್ರಕರಣದಲ್ಲಿ ಈಗಾಗಲೇ ಬಂಧಿಸಲಾಗಿರುವ ಆರೋಪಿ ರಾಚಪ್ಪ ನೀಡಿದ್ದ ಮಾಹಿತಿ ಆಧರಿಸಿ ವೆಂಕಟೇಶ್‌ನನ್ನು ಬಂಧಿಸಲಾಗಿದೆ.

‘ಸರ್ಕಾರಿ ನೌಕರಿ ಪಡೆಯುವ ಕನಸು ಕಾಣುತ್ತಿದ್ದ ವೆಂಕಟೇಶ್, ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಎಫ್‌ಡಿಎ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ.ದೊಡ್ಡಪ್ಪನ ಮಗನೇ ಆಗಿರುವ ರಾಚಪ್ಪ, ಪರೀಕ್ಷೆಗೂ ಕೆಲ ದಿನಗಳ ಮುನ್ನ ವೆಂಕಟೇಶ್‌ಗೆ ಕರೆ ಮಾಡಿದ್ದ. ನನಗೆ ಎಫ್‌ಡಿಎ ಪರೀಕ್ಷೆಯ ಪ್ರಶ್ನೆಪತ್ರಿಕೆ ಸಿಗಲಿದೆ. ಅದನ್ನು ನಿನಗೆ ಕೊಡುತ್ತೇನೆ. ಅಭ್ಯರ್ಥಿಗಳನ್ನು ಒಟ್ಟುಗೂಡಿಸಿ, ಪ್ರತಿಯೊಬ್ಬರಿಂದ ತಲಾ ₹10 ಲಕ್ಷದಿಂದ ₹ 20 ಲಕ್ಷ ಸಂಗ್ರಹಿಸು ಎಂದು ಹೇಳಿದ್ದನಂತೆ.

‘ಆತನ ಮಾತು ನಂಬಿದ್ದ ವೆಂಕಟೇಶ್, ಸ್ಥಳೀಯವಾಗಿ ಕೆಲ ಅಭ್ಯರ್ಥಿಗಳನ್ನು ಸೇರಿಸಿ ಪ್ರಶ್ನೆಪತ್ರಿಕೆಗಾಗಿ ಕಾಯುತ್ತಿದ್ದ. ಪರೀಕ್ಷೆ ಮುನ್ನಾ ದಿನವೇ ಸೋರಿಕೆ ಪ್ರಕರಣದ ಹಲವು ಆರೋಪಿಗಳು ಸಿಕ್ಕಿಬಿದ್ದರು. ಅದು ತಿಳಿಯುತ್ತಿದ್ದಂತೆ ವೆಂಕಟೇಶ್, ತಲೆಮರೆಸಿಕೊಂಡಿದ್ದ ಇವನನ್ನು ಸಿಸಿಬಿ ಪೊಲೀಸರು ಕೊನೆಗೂ ಬಂಧನ ಮಾಡಿದ್ದಾರೆ.

ಪರೀಕ್ಷೆಗೂ ಮುನ್ನಾದಿನವೇ ಆರೋಪಿ ವೆಂಕಟೇಶ್ ಕೈಗೆ ಪ್ರಶ್ನೆಪತ್ರಿಕೆ ಸಿಕ್ಕಿದ್ದ ಮಾಹಿತಿ ಪಡೆದುಕೊಂಡ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಹಲವು ಅಭ್ಯರ್ಥಿಗಳಿಗೆ ಆತ, ಪ್ರಶ್ನೆಪತ್ರಿಕೆ ನೀಡಿದ್ದಾನೆ. ಎಲ್ಲರೂ ಪರೀಕ್ಷೆ ಬರೆಯಲು ಸಿದ್ಧರಾಗಿದ್ದರೆಂಬ ಮಾಹಿತಿಯನ್ನು ಪೊಲೀಸರು ಪಡೆದುಕೊಂಡಿದ್ದಾರೆ.