ರಾಮನಗರ –
ಸೆಕ್ಸ್ ಸಿಡಿ ಬಿಡುಗಡೆ ಮಾಡಿ ರಮೇಶ ಜಾರಕಿಹೊಳಿ ವಿರುದ್ಧ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರಿಗೆ ಬೆದರಿಕೆ ಕರೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಕನಕಪುರ ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಇರುವ ಅವರ ನಿವಾಸಕ್ಕೆ ಪೊಲೀಸರು ಬುಧವಾರ ಭದ್ರತೆ ಒದಗಿಸಿದ್ದಾರೆ.

‘ನಾನು ನೀಡಿರುವ ದೂರಿನಿಂದ ಜಾರಕಿಹೊಳಿ ಬೆಂಬಲಿಗರು ಆಕ್ರೋಶಗೊಂಡಿದ್ದು, ದೂರವಾಣಿ ಕರೆಗಳ ಮೂಲಕ ನನಗೆ ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ಅಲ್ಲದೇ ನಾನು ಓಡಾಡುವ ಸ್ಥಳಗಳಲ್ಲಿ ಅಪರಿಚಿತರ ಗುಂಪು ನನ್ನನ್ನು ಹಿಂಬಾಲಿಸುತ್ತಿದ್ದು, ನಾನು ಹಾಗೂ ನನ್ನ ಕುಟುಂಬದವರಿಗೆ ಭಯ ಹುಟ್ಟಿಸಲು ಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಗತ್ಯ ಭದ್ರತೆ ಒದಗಿಸಬೇಕು’ ಎಂದು ಕೋರಿ ಅವರು ಬುಧವಾರ ಸಂಜೆ ಕನಕಪುರ ಗ್ರಾಮೀಣ ಠಾಣೆಯಲ್ಲಿ ದೂರು ಸಲ್ಲಿಸಿದರು.

ಇನ್ನೂ ಪ್ರಕರಣ ಸಂಬಂಧ ಇಂದು ಬೆಳಿಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ದೂರುದಾರ ದಿನೇಶ್ ಅವರಿಗೆ ಬುಧವಾರ ನೋಟಿಸ್ ನೀಡಿದ್ದಾರೆ.

ಇನ್ನೂ ಇದೇ ವೇಳೆ ದಿನೇಶ್ ಅವರು ಮಾತನಾಡಿ ಮುಖ್ಯಮಂತ್ರಿಗಳು ರಮೇಶ್ ಜಾರಕಿಹೊಳಿ ರಾಜೀನಾಮೆ ಪಡೆದಿರುವುದು ಸ್ವಾಗತಾರ್ಹ. ರಾಜ್ಯದ ಕೆಲವು ಸಚಿವರು, ಹಲವು ಪ್ರಭಾವಿ ರಾಜಕಾರಣಿಗಳ ಅಕ್ರಮಗಳ ದಾಖಲೆಗಳೂ ನನ್ನಲ್ಲಿ ಇವೆ. ಅವುಗಳನ್ನು ಸೂಕ್ತ ಸಂದರ್ಭದಲ್ಲಿ ಬಹಿರಂಗಪಡಿಸುತ್ತೇನೆ’ ಎಂದರು