ಚಾಮರಾಜನಗರ – ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಅಪರೂಪದ ವನ್ಯ ಜೀವಿಗಳು ಪತ್ತೆಯಾಗಿವೆ.
ಕಪ್ಪು ಚಿರತೆ ಕಾಣಿಸಿಕೊಂಡಿದ್ದರಿಂದ ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗಕ್ಕೆ ಪರಿಸರ ಪ್ರವಾಸಿಗರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮತ್ತು ಹನೂರು ತಾಲ್ಲೂಕುಗಳಿಗೆ ವಿಸ್ತಾರಗೊಂಡಿರುವ ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದಲ್ಲಿ ಹುಲಿ, ಚಿರತೆ , ಕಾಡೆಮ್ಮೆ ಗಳಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಇತ್ತು.
ಆದರೆ ಕಳೆದ ಕೆಲವು ದಿನಗಳ ಹಿಂದೆ ವನ್ಯ ಜೀವಿ ವಿಭಾಗದ ಪಿ.ಜಿ ಪಾಳ್ಯ ವಲಯ ಬಳಿ ಕಪ್ಪು ಚಿರತೆ ಸಂಚಾರ ಮಾಡುತ್ತಿರುವ ಚಿತ್ರಣಗಳು ಕ್ಯಾಮರಾ ಟ್ರಾಪಿಂಗ್‌ನಲ್ಲಿ ಸೆರೆಯಾಗಿದ್ದವು.
ಈ ವಿಭಾಗ ಮತ್ತಷ್ಟು ಖ್ಯಾತಿಯಾಗಲು ಅನುಕೂಲವಾಗಲಿದೆ ಎಂದು ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ತಿಳಿಸಿದ್ದಾರೆ.
ಸಾಮಾನ್ಯವಾಗಿ ಕಾಡಿನಲ್ಲಿ ಹುಲಿ ಚಿರತೆ ಆನೆಗಳು ಕಾಣಿಸುವುದು ಸಹಜವಾಗಿದೆ ಅದರಲ್ಲೂ ಕಪ್ಪು ಚಿರತೆ ಕಾಣಿಸಿಕೊಂಡಿರುವುದು ಅಚ್ಚರಿಯಾದರೂ ಸಂತಸ ತಂದಿದ್ದು ಮುಂದಿನ ದಿನಗಳಲ್ಲಿ ಕಪ್ಪು ಚಿರತೆಯ ರಕ್ಷಣೆ ಮಾಡುವುದು ಇಲಾಖೆಯ ಮೇಲೆ ಹೆಚ್ಚಿನ ಜವಬ್ದಾರಿಯಾಗಿದೆ ಎಂದು ಏಡುಕೊಂಡಲು ಹೇಳಿದರು.