ಬೆಳಗಾವಿ –
ಕರೋನ ದಿಂದಾಗಿ ಬಂದ್ ಆಗಿದ್ದ ಐತಿಹಾಸಿಕ ಸವದತ್ತಿ ಯಲ್ಲಮ್ಮ ದೇವಿಯ ದೇವಸ್ಥಾನ ನಾಳೆಯಿಂದ ಅಂದರೆ ಇದೇ ಫೆಬ್ರವರಿ 1ರಿಂದ ಭಕ್ತರ ದರ್ಶನಕ್ಕಾಗಿ ಮುಕ್ತ ಅವಕಾಶ ನೀಡಲಾಗುವುದು ಎಂದು ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ವಿಭಾಗಾಧಿಕಾರಿ ರವಿ ಕೋಟಾರಗಸ್ತಿ ತಿಳಿಸಿದ್ದಾರೆ.
ಕರೊನಾ ಮಾಹಾಮಾರಿ ಹಿನ್ನಲೆಯಲ್ಲಿ ಕಳೆದ ಮಾರ್ಚ್ 23ರಂದು ದೇಶದಲ್ಲಿ ಲಾಕಡೌನ್ ಜಾರಿಯಾದ ಬಳಿಕ 11 ತಿಂಗಳಿನಿಂದ ಸವದತ್ತಿ ಯಲ್ಲಮ್ಮ ದೇವಿ ದರ್ಶನವನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಕರ್ನಾಟಕ, ಮಹಾರಾಷ್ಟ್ರ ಗೋವಾ, ಆಂಧ್ರಪ್ರದೇಶ ಸೇರಿದಂತೆ ಲಕ್ಷಾಂತರ ಭಕ್ತರು ಆಗಮಿಸುತ್ತಿರುವುದರಿಂದ ಕರೊನಾ ವೈರಸ್ ಭೀತಿಯಿಂದಾಗಿ ಪ್ರವೇಶ ನಿಷೇಧಿಸಲಾಗಿತ್ತು.
ಈಗ ಫೆ. 1ರಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಆದೇಶ ನೀಡಿದ್ದಾರೆ. ಸಾಮಾಜಿಕ ಅಂತರ, ಸ್ಯಾನಿಟೈಜರ್ ಸೇರಿದಂತೆ ಕೋವಿಡ್ ನಿಯಮ ಉಲ್ಲಂಘನೆಯಾಗದಂತೆ ಭಕ್ತರಿಗೆ ಅವಕಾಶ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.