ಮಂಡ್ಯ –
ಸದಾ ವಿದ್ಯಾರ್ಥಿಗಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಯೋಚಿಸುವ ಶಿಕ್ಷಕರಿಗೆ ಶಿಕ್ಷಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಿನ ಚೈತನ್ಯ ನೀಡುತ್ತದೆ ಎಂದು ಮದ್ದೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್. ಕಾಳೀರಯ್ಯ ಹೇಳಿದರು.
ಮದ್ದೂರು ಪಟ್ಟಣದ ತಾಲೂಕು ಕ್ರೀಡಾಂಗಣ ದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಣ ಇಲಾಖೆಯ ವಿವಿಧ ಸಂಘಗಳಿಂದ ಆಯೋಜಿ ಸಿದ್ದ ಶಾಲಾ ಶಿಕ್ಷಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ ದರು
ಶಿಕ್ಷಕರು ಶಾಲೆಯಲ್ಲಿ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದಲ್ಲಿ ಹೆಚ್ಚಿನ ಗಮನ ಹರಿಸುವುದರಿಂದ ಬಹುತೇಕ ಸಂದರ್ಭಗಳಲ್ಲಿ ತಮ್ಮ ಆಸಕ್ತಿಯ ಕ್ರೀಡೆ, ಹವ್ಯಾಸಗಳನ್ನು ಮರೆತು ಬಿಟ್ಟಿರುತ್ತಾರೆ. ಹೀಗಾಗಿ ಇಂತಹ ಕ್ರೀಡಾಕೂಟ ಗಳು ವೃತ್ತಿ ಜೀವನದಲ್ಲಿ ಚಿರಸ್ಮರಣಿಯವಾಗಿ ಉಳಿಯುತ್ತವೆ.
ಹೀಗಾಗಿ ಕ್ರೀಡಾಕೂಟದಲ್ಲಿ ಶಿಕ್ಷಕರು ಉತ್ಸಾಹ ದಿಂದ ಪಾಲ್ಗೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದರು.ಕ್ರೀಡೆ ಪರಸ್ಪರರಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಮೂಡಿಸುವುದಲ್ಲದೆ ಒತ್ತಡ ನಿಯಂತ್ರಣಕ್ಕೆ ಅವಕಾಶ ಮಾಡಿಕೊಡುತ್ತದೆ. ಇಂದು ಶಿಕ್ಷಕರು ಮಾಡದ ಕೆಲಸವಿಲ್ಲ ಜನಗಣತಿ, ಚುನಾವಣೆ ಸೇರಿದಂತೆ 42ಕ್ಕೂ ಹೆಚ್ಚು ಕಾರ್ಯ ಕ್ರಮಗಳನ್ನು ಶಿಕ್ಷಕರು ನಿರ್ವಹಿಸಬೇಕಾಗಿದ್ದು, ಒತ್ತಡ ಹೆಚ್ಚಿರುತ್ತದೆ.
ವರ್ಷದಲ್ಲಿ ಕನಿಷ್ಠ ಎರಡು ದಿನಗಳಾದರೂ ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಿದಲ್ಲಿ ಮನಸ್ಸಿನ ಮೇಲಿನ ಒತ್ತಡ ಕಡಿಮೆ ಮಾಡಿ ಕೊಳ್ಳಬಹುದೆಂದರು.ಇದೇ ವೇಳೆ ಓಟದ ಸ್ಪರ್ಧೆ, ಗುಂಡು ಎಸೆತ, ನಡಿಗೆ ಸ್ಪರ್ಧೆ ಹಾಗೂ ಭಕ್ತಿ ಗೀತೆ, ಭಾವಗೀತೆ, ಜಾನಪದ ಗೀತೆ ಮತ್ತು ಏಕಪಾತ್ರ ಅಭಿನಯಗಳನ್ನು ಆಯೋಜಿಸಲಾಗಿತ್ತು. ಶಿಕ್ಷಣ ಇಲಾಖೆಯ ವಿವಿಧ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.
ಸುದ್ದಿ ಸಂತೆ ನ್ಯೂಸ್ ಮಂಡ್ಯ…..